October 14, 2026
Wednesday, October 14, 2026
spot_img

ಬೈಕ್ ಸವಾರನ ಮೇಲೆ ಏಕಾಏಕಿ ಜಿಗಿದ ಚಿರತೆ: ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಪ್ರಾಣ

ಹೊಸದಿಗಂತ ವರದಿ ಮುಂಡಗೋಡ:

ಮುಂಡಗೋಡ ತಾಲೂಕಿನ ನ್ಯಾಸರ್ಗಿ–ದುಂಡಸಿ ಮಾರ್ಗದ ಮಧ್ಯೆ ಚಿರತೆಯೊಂದು ಬೈಕ್ ಸವಾರನ ಮೇಲೆ ದಾಳಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಹಾರ್ನ್ ಮಾಡಿದ ಪರಿಣಾಮ ಚಿರತೆ ಹೆದರಿ ಕಾಡಿನತ್ತ ಓಡಿ ಹೋಗಿದ್ದು ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಟ್ಟಣದ ಯುವಕ ರಾಘವೇಂದ್ರ ಅವರು ಮುಂಡಗೋಡದಿಂದ ನ್ಯಾಸರ್ಗಿ–ಗೌಳಿದಡ್ಡಿ ಮಾರ್ಗವಾಗಿ ಬೈಕ್‌ನಲ್ಲಿ ದುಂಡಸಿ ಕಡೆಗೆ ತೆರಳುತ್ತಿದ್ದರು. ನ್ಯಾಸರ್ಗಿ ಪ್ಲಾಟ್‌ನ್ನು ದಾಟಿ ಸುಮಾರು 500 ಮೀಟರ್ ಮುಂದಕ್ಕೆ ಸಾಗುತ್ತಿದ್ದ ವೇಳೆ ರಸ್ತೆಯ ಪಕ್ಕದಲ್ಲಿದ್ದ ಚಿರತೆ ಏಕಾಏಕಿ ಬೈಕ್ ಸವಾರನತ್ತ ಹಾರಿದೆ.

ಹಾರ್ನ್ ನಿಂದ ಉಳಿಯಿತು ಜೀವ

ಚಿರತೆ ದಾಳಿ ಮಾಡಲು ಮುಂದಾಗುತ್ತಿದ್ದಂತೆಯೇ ಅದೇ ರಸ್ತೆಯಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ಚಾಲಕ ಜೋರಾಗಿ ಹಾರ್ನ್ ಮಾಡಿದ್ದಾರೆ. ಹಾರ್ನ್ ಶಬ್ದಕ್ಕೆ ಬೆದರಿದ ಚಿರತೆ ತಕ್ಷಣವೇ ರಸ್ತೆ ಬದಿಯಿಂದ ಕಾಡಿನತ್ತ ಓಡಿ ಹೋಗಿದೆ. ದಾಳಿಯಿಂದ ಆತಂಕಗೊಂಡ ಬೈಕ್ ಸವಾರನಿಗೆ ಲಾರಿ ಚಾಲಕ ಧೈರ್ಯ ತುಂಬಿ, ಘಟನೆಯ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಅನಾಹುತ ಸಂಭವಿಸುತ್ತಿತ್ತು

ಘಟನೆಯ ಬಗ್ಗೆ ಬೈಕ್ ಸವಾರ ರಾಘವೇಂದ್ರ ಮಾತನಾಡಿ, ನಾನು ಬೈಕ್‌ನಲ್ಲಿ ನ್ಯಾಸರ್ಗಿ–ದುಂಡಸಿ ಕಡೆಗೆ ಹೋಗುತ್ತಿದ್ದಾಗ ನ್ಯಾಸರ್ಗಿ ಪ್ಲಾಟ್‌ ದಾಟಿದ ಕೆಲವೇ ದೂರದಲ್ಲಿ ಏಕಾಏಕಿ ಚಿರತೆ ನನ್ನ ಬೈಕ್‌ನತ್ತ ಹಾರಿತು. ಅದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ಚಾಲಕ ಹಾರ್ನ್ ಮಾಡಿದ್ದರಿಂದ ಚಿರತೆ ಹೆದರಿ ಕಾಡಿನತ್ತ ಓಡಿ ಹೋಯಿತು. ಲಾರಿ ಚಾಲಕ ಸಮಯಕ್ಕೆ ಹಾರ್ನ್ ಮಾಡದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ನಂತರ ‌ಮಾರ್ಗವನ್ನೇ ಬಿಟ್ಟು ಸನವಳ್ಳಿಯಿಂದ ತೆರಳಿದೆ.ಈ ರಸ್ತೆಯಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಓಡಾಡಬೇಕು ಎಂದಿದ್ದಾರೆ.

Must Read