ಹೊಸದಿಗಂತ ವರದಿ, ಚಿತ್ರದುರ್ಗ:
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಎಲ್ಲರಂತಲ್ಲ ಎಂದು ಹೇಳುತ್ತಿದ್ದರು. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಅದನ್ನು ನಿರೂಪಿಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಚಿತ್ರದುರ್ಗ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವ್ಯಾರೂ ಅವರನ್ನು ಹಿಡಿದುಕೊಂಡಿಲ್ಲ. ಒಂದು ತಪ್ಪು ಮುಚ್ಚಲು ಹತ್ತಾರು ತಪ್ಪು ಮಾಡುತ್ತಿದ್ದಾರೆ. ತಮ್ಮ ಕಾಲಿನ ಮೇಲೆ ಕಲ್ಲು ಹಾಕಿಕೊಂಡು ಗಾಯ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಮೊದಲು ನಾನು ಹೇಳಿದ್ದೆ. ಇದೇ ಕೆಲಸ ಸದನದಲ್ಲಿ ಮಾತನಾಡಿ ಬಗೆಹರಿಸಬೇಕಿತ್ತು. ಆದರೆ ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಕಾನೂನು ತನ್ನದೇ ಆದ ದೃಷ್ಠಿಯಲ್ಲಿ ಕೆಲಸ ಮಾಡುತ್ತದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದರು.
ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಮಾತನಾಡುವುದು ಸರಿಯಲ್ಲ. ಆತ್ಮಸಾಕ್ಷಿಗಿಂತ ನೈತಿಕತೆ ದೊಡ್ಡದು. ಈ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವರು ವಸ್ತುವಾಗುವುದು ಬೇಡ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಕ್ಲೀನ್ ಚಿಟ್ ಆದ ನಂತರ ಅವರೇ ಮತ್ತೆ ಮುಖ್ಯಮಂತ್ರಿಯಾಗಲಿ ನಮ್ಮದೇನೂ ತಕರಾರಿಲ್ಲ. ಎಲ್ಲರಂತಲ್ಲ ಎಂದು ಹೇಳುವ ಸಿದ್ದರಾಮಯ್ಯ ಅವರು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳ್ಳೆಯರು ಎಂದು ಸಲಹೆ ಮಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಕುರಿತು ಮಾತನಾಡಿ, ಮುಂದಿನ ಒಂದೂವರೆ ತಿಂಗಳಲ್ಲಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತನಾಡಲಾಗಿದೆ. ಸಂಸದ ಗೋವಿಂದ ಕಾರಜೋಲ ಅವರು ಈ ಕುರಿತು ವಿಶೇಷ ಕಾಳಜಿ ಹೊಂದಿದ್ದಾರೆ. ಕೆಲವು ತಾಂತ್ರಿಕ ಮಾಹಿತಿ ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ. ಅವರಿಂದ ಮಾಹಿತಿ ಪೂರೈಕೆಯಾದ ಕೂಡಲೇ ಕೇಂದ್ರದಿಂದ ಅನುದಾನ ಲಭ್ಯವಾಗಲಿದೆ. ಮೂರು ಕಂತುಗಳಲ್ಲಿ ಅನುದಾನ ನೀಡಲಾಗುವುದು ಎಂದು ತಿಳಿಸಿದರು.