ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹಾಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ನಿವೃತ್ತಿಯ ಬಳಿಕ, ಜೂನ್ 30ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ರಕ್ಷಣಾ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ, ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು 2028ರ ಆಗಸ್ಟ್ 31ರವರೆಗೆ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಧೀರಜ್ ಸೇಠ್, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಯ ಹಳೆಯ ವಿದ್ಯಾರ್ಥಿಯಾಗಿದ್ದು, ಆರ್ಮರ್ಡ್ ಕಾರ್ಪ್ಸ್ ಅಧಿಕಾರಿಯಾಗಿ ನಾಲ್ಕು ದಶಕಗಳಿಗೂ ಅಧಿಕ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.
1986ರ ಡಿಸೆಂಬರ್‌ನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ಅವರು, ವಿವಿಧ ಭೌಗೋಳಿಕ ಮತ್ತು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮರುಭೂಮಿ ವಲಯದಲ್ಲಿ ಆರ್ಮರ್ಡ್ ರೆಜಿಮೆಂಟ್ ಕಮಾಂಡರ್ ಆಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ದಂಗೆ ನಿಗ್ರಹ ಕಾರ್ಯಾಚರಣೆಗಳ ಭಾಗವಾಗಿ ಯೂನಿಫಾರ್ಮ್ ಫೋರ್ಸ್ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಬಡ್ತಿ ಪಡೆದ ಬಳಿಕ 21ನೇ ಸ್ಟ್ರೈಕ್ ಕಾರ್ಪ್ಸ್ ಕಮಾಂಡರ್ ಹಾಗೂ ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ ಸೌತ್ ವೆಸ್ಟರ್ನ್ ಕಮಾಂಡ್ ಮತ್ತು ಸದರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವತಂತ್ರ ಶಸ್ತ್ರಸಜ್ಜಿತ ಬ್ರಿಗೇಡ್, ಅಂಗೋಲಾದಲ್ಲಿ ವಿಶ್ವಸಂಸ್ಥೆಯ ಶಾಂತಿ ಮಿಷನ್, ಸೇನಾ ಪ್ರಧಾನ ಕಚೇರಿ ಹಾಗೂ ವಿವಿಧ ಪ್ರಮುಖ ಕಮಾಂಡ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅನುಭವವೂ ಅವರಿಗೆ ಇದೆ.
1997ರಲ್ಲಿ ಜನರಲ್ ಶಂಕರ್ ರಾಯ್ ಚೌಧರಿ ಅವರ ಬಳಿಕ, ಆರ್ಮರ್ಡ್ ಕಾರ್ಪ್ಸ್‌ನಿಂದ ಸೇನಾ ಮುಖ್ಯಸ್ಥ ಹುದ್ದೆ ಅಲಂಕರಿಸುವ ಪ್ರಮುಖ ಅಧಿಕಾರಿಗಳಲ್ಲಿ ಧೀರಜ್ ಸೇಠ್ ಒಬ್ಬರಾಗಿದ್ದಾರೆ. ಅವರ ನೇಮಕಾತಿ ಭಾರತೀಯ ಸೇನೆಯ ನಾಯಕತ್ವದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.



