ಮನೆಗಳಲ್ಲಿ ರಾಮದೀಪಗಳ ಜ್ವಲನ: ಮೈಸೂರಿನ ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀ ಮಿಂಚಿನ‌ ಸಂಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೈಸೂರಿನ ಬಿ ಬಿ ಕೇರಿಯಲ್ಲಿ ಸೋಮವಾರ ಸಂಜೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಮಿಂಚಿನ ಸಂಚಾರ ಕೈಗೊಂಡು ನಿವಾಸಿಗಳಲ್ಲಿ ಪುಳಕ ಉಂಟು ಮಾಡಿದರು ‌.

ಹಿಂದು ಸಮಾಜದಲ್ಲಿ ಬಾಂಧವ್ಯ ಮತ್ತು ಸಾಮರಸ್ಯವನ್ನು ಸುದೃಡಗೊಳಿಸುವ ಧರ್ಮ ಜಾಗೃತಿಯನ್ನು ಮೂಡಿಸುವ ಸಲುವಾಗಿ ತಮ್ಮ 36 ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಹಮ್ಮಿಕೊಂಡ ಹತ್ತಾರು ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳ ಬಡಾವಣೆಗಳಿಗೆ ಸಾಮರಸ್ಯದ ನಡಿಗೆಯನ್ನು ಆದ್ಯತೆಯಲ್ಲಿ ಹಮ್ಮಿಕೊಳ್ಳುವಂತೆ ಚಾತುರ್ಮಾಸ್ಯ ಸಮಿತಿಗೆ ಸೂಚಿಸಿದ್ದರು .ಅದರಂತೆ ಮೈಸೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧರ್ಮಜಾಗರಣ ವಿಭಾಗ ಮತ್ತು ಸಾಮರಸ್ಯ ವೇದಿಕೆಗಳ ಜಂಟಿ ಸಂಯೋಜನೆಯಲ್ಲಿ ಬಿ ಬಿ ಕೇರಿ ಬಡಾವಣೆಗೆ ತೆರಳಿದರು .

ಸುಮಾರು ಇನ್ನೂರಕ್ಕೂ ಅಧಿಕ ಮನೆಗಳನ್ನು ಹೊಂದಿರುವ ಬಡಾವಣೆಗೆ ಶ್ರೀಗಳ ಭೇಟಿಯ ಹಿನ್ನೆಲೆಯಲ್ಲಿ ಪ್ರತೀ ಮನೆಗಳ ಮುಂಭಾಗ ಓಣಿ ರಸ್ತೆಗಳುದ್ದಕ್ಕೂ ಸಾಲು ಸಾಲು ರಂಗೋಲಿ , ಕೇಸರಿ ಪತಾಕೆ , ಭಗವಾಧ್ವಜ , ತಳಿರು ತೋರಣ ಹೂವಿನ ಮಾಲೆಗಳ ಮೂಲಕ ಅಲಂಕರಿಸಲಾಗಿತ್ತು .

ಶ್ರೀಗಳು ಆಗಮಿಸುತ್ತಿದ್ದಂತೆ ಜೈಶ್ರೀರಾಮ್ ,ಅಯೋಧ್ಯಾಪತಿ ಶ್ರೀ ರಾಮಚಂದ್ರ ಭಗವಾನ್ ಕೀ ಜೈ , ಭಾರತ್ ಮಾತೆ , ಸನಾತನ ಧರ್ಮಗಳಿಗೆ ಜೈಕಾರಗಳು , ವಂದೇ ಮಾತರಮ್ , ನಾವೆಲ್ಲ ಹಿಂದು ನಾವೆಲ್ಲ ಒಂದು ಮೊದಲಾದ ಘೋಷಣೆಗಳು ಮೊಳಗಿದವು .

ಬಾಲಕರಿಂದ ನಾಸಿಕ್ ಬ್ಯಾಂಡ್ ವಾದನ ಮಹಿಳೆಯರು ಯುವತಿಯರು ಪೂರ್ಣಕುಂಭ ಕಲಶಗಳನ್ನು ಹೊತ್ತು ಶ್ರೀಗಳನ್ನು ಸಂಭ್ರಮದಿಂದ ಸ್ವಾಗತಿಸಿದರು .ಇಡೀ ಬಡಾವಣೆಯಲ್ಲಿ ಉತ್ಸಾಹ ಸಡಗರಗಳು ಕಂಡುಬಂದವು .
ಆರಂಭದಲ್ಲಿ ಐದು ಮನೆಗಳಿಗೆ ತೆರಳಿ ಶ್ರೀ ಮಠದಿಂದಲೇ ಎಲ್ಲ ಮನೆಗಳಿಗೂ ಕೊಡಮಾಡಿದ ಹಿತ್ತಾಳೆಯ ಶ್ರೀ ರಾಮ ದೀಪ ಗಳನ್ನು ಬೆಳಗಿ ಮನೆಯ ದೇವರ ಭಾವಚಿತ್ರಗಳಿಗೆ ಹೂವನ್ನು ಏರಿಸಿ ಮಂಗಳಾರತಿ ಬೆಳಗಿದರು .

ಮನೆ ಮಂದಿ ಶ್ರೀಗಳ ಕಾಲಿಗೆ ನೀರೆರೆದು, ಅರಶಿನ ಕುಂಕುಮ , ಓಕುಳಿಯ ಆರತಿಗಳನ್ನು ಬೆಳಗಿ ಭಕ್ತಿಯಿಂದ ಬರಮಾಡಿಕೊಂಡರು . ಮನೆಗೆ ಬಂದ ಗುರುಗಳಿಗೆ ಫಲವಸ್ತುಗಳನ್ಬು ಅರ್ಪಿಸಿದರು. ‌

ಪ್ರತೀ ಮನೆಗಳ ಸದಸ್ಯರನ್ನು ಆತ್ಮೀಯವಾಗಿ ಪರಿಚಯ ಮಾಡಿಕೊಂಡು ಯೋಗಕ್ಷೇಮ ವಿಚಾರಿಸಿದರು . ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣದ ತನಕ ಪ್ರತೀ ದಿನ ಸಂಜೆ ರಾಮದೀಪ ಬೆಳಗಿ ರಾಮಮಂತ್ರ ಜಪ ಮಾಡಿ ಪ್ರಾರ್ಥಿಸುವಂತೆ ಸೂಚಿಸಿದರು .

ಮಕ್ಕಳಿಗೆ ಉತ್ತಮ ಶಿಕ್ಷಣ , ಸಂಸ್ಕಾರಗಳನ್ನು ನೀಡಬೇಕು .ಹಿಂದು ಸಮಾಜದ ಅವಿಭಾಜ್ಯ ಅಂಗವಾಗಿರುವ ನಾವೆಲ್ಲ ನಮ್ಮ ನಮ್ಮ‌ಕೇರಿ ಬಡಾವಣೆಗಳಲ್ಲೂ ಸಾಮರಸ್ಯ ಐಕಮತ್ಯ ಮತ್ತು ಧರ್ಮ ಪ್ರಜ್ಞೆಯನ್ನು ಉಳಿಸಿ ಒಗ್ಗಟ್ಟಿನಿಂದ ಶಾಂತಿ ನೆಮ್ಮದಿಯಿಂದ ಜೀವಿಸಬೇಕಾಗಿದೆ .ಇದೇ ಹಿಂದು ಸಮಾಜದ ಶಕ್ತಿಯಾಗಿದೆ ‌. ಅದನ್ನುಳಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದರು .

ಎಲ್ಲ ಮನೆಗಳಲ್ಲಿ ದೇವರ ಅತ್ಯಂತ ಸ್ವಚ್ಛ ಮತ್ತು ಸುಂದರವಾಗಿ ದೇವರಿಗಾಗಿ ಪ್ರತ್ಯೇಕ ಜಾಗವನ್ನು ಮೀಸಲಿಟ್ಟು ದೇವ ದೇವತೆಯರ ಚಿತ್ರ ಮೂರ್ತಿ ಕಲಶ ಗಳನ್ನಿಟ್ಟು ಅತ್ಯಂತ ಶ್ರದ್ಧೆಯಿಂದ ಪೂಜಿಸಿಕೊಂಡು ಬರುತ್ತಿರುವುದನ್ನು ಕಂಡು ಅತ್ಯಂತ ಸಂತಸಪಟ್ಟರು .

ಕೇರಿಯ ಪಟ್ಟಾಲದಮ್ಮ ದೇವಿ ಮಂದಿರಕ್ಕೆ ಭೇಟಿ ನೀಡಿ ಆರತಿ ಬೆಳಗಿದರು . ಎಲ್ಲ ಮನೆಗಳಿಗೂ ಶ್ರೀ ಕೃಷ್ಣನ ಸಿಹಿತಿಂಡಿ ಪ್ರಸಾದಗಳನ್ನು ವಿತರಿಸಿದರು .

ಸಾಮಾಜಿಕ ನ್ಯಾಯ ವೇದಿಕೆಯ ಡಾ ಆನಂದ್ ಕುಮಾರ್ , ಸ್ಥಳೀಯರಾದ ನಾಗೇಂದ್ರ , ಧರ್ಮ ಜಾಗರಣದ ವಾಮನ್ ರಾವ್ , ನಿತ್ಯಾನಂದ ಗಿರೀಶ , ಮೊದಲಾದವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ್ದರು .ಪುತ್ತೂರಿನ ಹಿಂದು ನೇತಾರ ಅರುಣ ಕುಮಾರ ಪುತ್ತಿಲ , ಚಾತುರ್ಮಾಸ್ಯ ಸಮಿತಿಯ ಪ್ರಮುಖರಾದ ಎಂ‌ ಕೃಷ್ಣರಾಜ ಪುರಾಣಿಕ , ರವಿ ಶಾಸ್ತ್ರಿ , ಶ್ರೀಗಳ ಆಪ್ತರಾದ ವಿಷ್ಣು ಆಚಾರ್ಯ , ಕೃಷ್ಣ ಭಟ್ , ವಾಸುದೇವ ಭಟ್ , ಶ್ರೀನಿವಾಸ ಪ್ರಸಾದ್ , ಮೊದಲಾದವರಿದ್ದರು .ಶ್ರೀಗಳವರ ಶಾಸ್ತ್ರ ವಿದ್ಯಾರ್ಥಿಗಳೂ ಆಗಮಿಸಿ ಸಹಕರಿಸಿದರು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!