ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ನೀಡಲು ಹೆಚ್ಚಿದ ಕೂಗು- ಬೆಂಬಲಕ್ಕೆ ನಿಂತ ದೇಶಗಳಿವು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಗತ್ತಿನ ಸಮಾನ ಪ್ರಾತಿನಿಧ್ಯಕ್ಕಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸುಧಾರಣೆಗಳಿಗೆ ಭಾರತವು ಒತ್ತಾಯಿಸುತ್ತಿರುವುದರಿಂದ, ಹಲವಾರು ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸಿಗಲು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿವೆ. ಅಂತಹ ಪ್ರಮುಖ ದೇಶಗಳು ಇವಾಗಿವೆ.
ಫ್ರಾನ್ಸ್: ಭದ್ರತಾ ಮಂಡಳಿ ಮುಕ್ತ ಚರ್ಚೆಯಲ್ಲಿ ಇತ್ತೀಚೆಗೆ ಮಾತನಾಡುವ ವೇಳೆ ವಿಶ್ವಸಂಸ್ಥೆ ಫ್ರೆಂಚ್ ರಾಯಭಾರಿ ನಿಕೋಲಸ್ ಡಿ ರಿವಿಯೆರ್ “ಜರ್ಮನಿ, ಬ್ರೆಜಿಲ್, ಭಾರತ ಮತ್ತು ಜಪಾನ್‌ ದೇಶಗಳ ಖಾಯಂ ಸದಸ್ಯತ್ವ ಬೇಡಿಕೆಯನ್ನು ಫ್ರಾನ್ಸ್ ಬೆಂಬಲಿಸುತ್ತದೆ” ಎಂದು ಒತ್ತಿಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ನಾವು ಪ್ರಪಂಚದ ಎಲ್ಲಾ ಭಾಗದ ದೇಶಗಳ ಉಪಸ್ಥಿತಿಯನ್ನು ನೋಡಲು ಬಯಸುತ್ತೇವೆʼ ಎಂದು ಅವರು ಹೇಳಿದ್ದಾರೆ. “ಫ್ರಾನ್ಸ್ ಭದ್ರತಾ ಮಂಡಳಿಯ ಸುಧಾರಣೆಯ ಪರವಾಗಿದೆ ಎಂದು ನಾನು ಬಲವಾಗಿ ಪುನರುಚ್ಚರಿಸಲು ಬಯಸುತ್ತೇನೆ. ನಾವು ಭದ್ರತಾ ಮಂಡಳಿಯ ವಿಸ್ತರಣೆಯನ್ನು ಬೆಂಬಲಿಸುತ್ತೇವೆ ಮತ್ತು ಭಾರತದಂತಹ ಹೊಸ ಶಕ್ತಿಗಳ ಹೊರಹೊಮ್ಮುವಿಕೆಯನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಭದ್ರತಾ ಮಂಡಳಿಯಲ್ಲಿ ಅವರ ಶಾಶ್ವತ ಉಪಸ್ಥಿತಿಗೆ ನಮ್ಮ ಬೆಂಬಲವಿದೆ” ಎಂದು ಅವರು ಹೇಳಿದ್ದಾರೆ.

ಬ್ರಿಟನ್: ಇಂಗ್ಲೆಂಡ್ ರಾಯಭಾರಿ ಬಾರ್ಬರಾ ವುಡ್‌ವರ್ಡ್ ಈ ವಾರದ ಆರಂಭದಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡುವ ಬಗ್ಗೆ ತಮ್ಮ ದೇಶದ ಬೆಂಬಲವನ್ನು ಪುನರುಚ್ಚರಿಸಿದರು. “ನಾವು ಬ್ರೆಜಿಲ್, ಜರ್ಮನಿ, ಭಾರತ ಮತ್ತು ಜಪಾನ್‌ಗೆ ಹೊಸದಾಗಿ ಶಾಶ್ವತ ಸ್ಥಾನಗಳನ್ನು ನೀಡುವ ಬಗ್ಗೆ ಮತ್ತು ಆಫ್ರಿಕನ್ ದೇಶಗಳಿಗೆ ಶಾಶ್ವತ ಪ್ರಾತಿನಿಧ್ಯ ನೀಡುವುದನ್ನು ಬೆಂಬಲಿಸುತ್ತೇವೆ” ಎಂದು ಅವರು ಹೇಳಿದರು. ವುಡ್ವರ್ಡ್ “ಭದ್ರತಾ ಮಂಡಳಿ ಪ್ರಪಂಚದ ಎಲ್ಲಾ ದೇಶಗಳನ್ನು ಪ್ರತಿನಿಧಿಸುವ ಪ್ರತಿನಿಧಿಯಾಗಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯುನೈಟೆಡ್ ಸ್ಟೇಟ್ಸ್: ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವುದನ್ನು ಅಮೆರಿಕ ಸಹ ಸ್ಪಷ್ಟವಾಗಿ ಬೆಂಬಲಿಸಿದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಇತ್ತೀಚೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ “ಭಾರತದ ಬಿಡ್ ಅನ್ನು ಅಮೆರಿಕ ಬೆಂಬಲಿಸುತ್ತದೆ” ಎಂದು ಪುನರುಚ್ಚರಿಸಿದ್ದಾರೆ.

ರಷ್ಯಾ: ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಈ ಹಿಂದಿನಿಂದಲೂ ಭಾರತಕ್ಕೆ ಯುಎನ್‌ಎಸ್‌ಸಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಬೆಂಬಲಿಸುತ್ತಿದ್ದಾರೆ. ಅದರ ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ರಷ್ಯಾದ ನಿಲುವನ್ನು ಉಲ್ಲೇಖಿಸಿದ್ದಾರೆ. “ಭಾರತವು ಪ್ರಸ್ತುತ ಆರ್ಥಿಕ ಬೆಳವಣಿಗೆಯಲ್ಲಿ ಪ್ರಪಂಚದ ಭಲಾಡ್ಯ ರಾಷ್ಟ್ರಗಳಲ್ಲಿ ಒಂದಾಗಿದೆ. ಬಹುಶಃ ವಿಶ್ವದ ನಾಯಕನೇ ಆಗಿದೆ ಎಂದು ನಾವು ಭಾವಿಸಿದ್ದೇವೆ. ಅದರ ಜನಸಂಖ್ಯೆಯು ಶೀಘ್ರದಲ್ಲೇ ಇತರ ಯಾವುದೇ ದೇಶಕ್ಕಿಂತ  ದೊಡ್ಡದಾಗುತ್ತದೆ. ವಿವಿಧ ರೀತಿಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಭಾರತ ಹೊಸ ಬಗೆಯ ರಾಜತಾಂತ್ರಿಕ ನೀತಿಯನ್ನು ಹೊಂದಿದೆ. ಅದು ಖಾಯಂ ಸ್ಥಾನ ಪಡೆಯಲು ಎಲ್ಲಾ ರೀತಿಯಾದ ಅಧಿಕಾರ ಪಡೆದಿರುವ ಜೊತೆಗೆ ಪ್ರಪಂಚದ ರಾಷ್ಟ್ರಗಳಲ್ಲಿ ಗಣ್ಯ ಸ್ಥಾನವನ್ನು ಪಡೆದಿದೆ” ಎಂದು ಸ್ಪಷ್ಟ ಬೆಂಬಲ ಸೂಚಿಸಿದ್ದಾರೆ.

G-4 ದೇಶಗಳು: ಬ್ರೆಜಿಲ್, ಜರ್ಮನಿ, ಭಾರತ ಮತ್ತು ಜಪಾನ್ – ಈ ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಗಳಿಗಾಗಿ ಪರಸ್ಪರ ಬೆಂಬಲಿಸುತ್ತಿವೆ. ಏತನ್ಮಧ್ಯೆ, ಭಾರತವು ಈ ತಿಂಗಳ ಕೊನೆಯಲ್ಲಿ ಯುಎನ್‌ಎಸ್‌ಸಿಯ ಖಾಯಂ ಸದಸ್ಯರಾಗಿ ಎರಡು ವರ್ಷಗಳ ಅವಧಿಯನ್ನು ಮುಕ್ತಾಯಗೊಳಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!