ಹೊಸದಿಗಂತ ವರದಿ ದಾವಣಗೆರೆ:
ಸರ್ಕಾರಿ ಇಲಾಖೆಗಳಲ್ಲಿನ ಕರ್ತವ್ಯಲೋಪ, ನಿರ್ಲಕ್ಷ್ಯ, ದುರಾಡಳಿತ ಹಾಗೂ ಲಂಚಗುಳಿತನವನ್ನು ಲೋಕಾಯುಕ್ತ ಸಂಸ್ಥೆ ಗಂಭೀರವಾಗಿ ಪರಿಗಣಿಸಲಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲೋಕಾಯುಕ್ತ ತಂಡ ನಡೆಸಿದ ತಪಾಸಣೆ ವೇಳೆ ಕಂಡುಬಂದ ಅವ್ಯವಸ್ಥೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವ್ಯವಸ್ಥೆ ಕಂಡುಬಂದರೆ ಕ್ರಮ
ಕಳೆದ ಎರಡು ದಿನಗಳಿಂದ ಲೋಕಾಯುಕ್ತದ ಸುಮಾರು 40 ಅಧಿಕಾರಿಗಳು ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲವು ಲೋಪದೋಷಗಳು ಕಂಡುಬಂದಿವೆ. ಜನಸಾಮಾನ್ಯರ ಸೇವೆಗಾಗಿ ಕರ್ತವ್ಯ ನಿರ್ವಹಿಸಬೇಕಾದ ಕೆಲ ಅಧಿಕಾರಿಗಳು ಹಾಗೂ ನೌಕರರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡುಬಂದಿದೆ. ಜನರಿಗೆ ಅಗತ್ಯ ಮೂಲಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುವುದನ್ನು ಸಹಿಸಲಾಗದು ಎಂದು ಅವರು ಹೇಳಿದರು.
ಶಿಕ್ಷಣ, ಆರೋಗ್ಯ, ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯ ಮುಂದುವರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಎಸ್. ಪಾಟೀಲ್ ಎಚ್ಚರಿಸಿದರು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಜನರ ಸೇವೆಗೆ ಮುಂದಾಗಬೇಕು ಎಂದು ತಾಕೀತು ಮಾಡಿದರು.
ಇದನ್ನೂ ಓದಿ:
ಸೂಳೆಕೆರೆ ಮಾಲಿನ್ಯಕ್ಕೆ ಕಳವಳ
ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಾಂತಿಸಾಗರದ ವಿಚಾರದಲ್ಲಿ ಲೋಕಾಯುಕ್ತ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದರು. ಸೂಳೆಕೆರೆಯೊಳಗೆ ಕೆರೆಬಿಳಚಿ ಗ್ರಾಮದ ಕಲುಷಿತ ನೀರು ಸೇರುತ್ತಿರುವುದು ನೋವಿನ ಸಂಗತಿ ಎಂದರು.
ಕೆರೆಬಿಳಚಿ ಸೇರಿದಂತೆ ಸುತ್ತಮುತ್ತಲಿನ 9 ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವ ಅಗತ್ಯವಿದೆ. ಈ ಕುರಿತು ವಿಸ್ತೃತ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಗಳ ಸಂರಕ್ಷಣೆ ಎಲ್ಲರ ಹೊಣೆ
ಇಂತಹ ಮತ್ತೊಂದು ಕೆರೆಯನ್ನು ನಿರ್ಮಿಸುವುದು ಸುಲಭವಲ್ಲ. ಹೀಗಾಗಿ ಇರುವ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಕೆರೆಗಳನ್ನು ಕಲುಷಿತಗೊಳಿಸಲು ಅವಕಾಶ ನೀಡಬಾರದು. ಮುಂದಿನ ಪೀಳಿಗೆಗಾಗಿ ಜಲಮೂಲಗಳನ್ನು ಉಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲೂ ಇದೆ ಎಂದು ಅವರು ಹೇಳಿದರು.
ಲೋಕಾಯುಕ್ತ ಎಡಿಜಿಪಿ ಮನೀಷ್ ಕರ್ಬೀಕರ್, ಕಾರ್ಯದರ್ಶಿ ಕೆ.ಶ್ರೀನಾಥ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಹೆಚ್.ಟಿ.ಶೇಖರ್, ಲೋಕಾಯುಕ್ತ ಹೆಚ್ಚುವರಿ ವಿಚಾರಣಾ ನೋಂದಣಿ ಅಧಿಕಾರಿ ಸಿ.ರಾಜಶೇಖರ್, ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.



