September 15, 2026
Tuesday, September 15, 2026
spot_img

ರಾಜಸ್ಥಾನದಲ್ಲಿ ಕಮಲದ ಕಮಾಲ್: ಫಲಿತಾಂಶದ ಬೆನ್ನಲ್ಲೇ ಪ್ರಧಾನಿ ಮೋದಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಪ್ರದರ್ಶನ ನೀಡಿದ್ದು, ಒಟ್ಟು 10,245 ವಾರ್ಡ್‌ಗಳ ಪೈಕಿ 4,179 ವಾರ್ಡ್‌ಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಕಾಂಗ್ರೆಸ್ ಗೆ ಎಷ್ಟು? ಉಳಿದವರಿಗೆಷ್ಟು?

ಕಾಂಗ್ರೆಸ್ 3,613 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದರೆ, ಪಕ್ಷೇತರ ಅಭ್ಯರ್ಥಿಗಳು 2,273 ವಾರ್ಡ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಧಾನಿ ಏನಂದ್ರು ನೋಡಿ

ಫಲಿತಾಂಶದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಜನರಿಗೆ ಧನ್ಯವಾದ ಅರ್ಪಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಮೋದಿ, ನಗರ ಚುನಾವಣೆಯ ಫಲಿತಾಂಶವು ಬಿಜೆಪಿ ಆಡಳಿತ ಹಾಗೂ ಅಭಿವೃದ್ಧಿ ನೀತಿಗಳಿಗೆ ಜನರಿಂದ ದೊರೆತಿರುವ ಬಲವಾದ ಬೆಂಬಲವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ‘ಡಬಲ್ ಎಂಜಿನ್’ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಜನರು ಮತ್ತೊಮ್ಮೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿರುವ ಅವರು, ಈ ಗೆಲುವು ರಾಜಸ್ಥಾನವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಲ್ಕು ಮಹಾನಗರಗಳಲ್ಲಿ ಬಿಜೆಪಿಗೆ ಮುನ್ನಡೆ

ಜೈಪುರ, ಕೋಟಾ, ಉದಯಪುರ ಹಾಗೂ ಭಿಲ್ವಾರಾ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಮಂಡಳಿ ರಚಿಸಲು ಅಗತ್ಯ ಬಹುಮತ ಪಡೆದುಕೊಂಡಿದೆ. ಜೈಪುರದ 150 ವಾರ್ಡ್‌ಗಳ ಪೈಕಿ ಬಿಜೆಪಿ 78ರಲ್ಲಿ ಗೆದ್ದಿದ್ದು, ಕಾಂಗ್ರೆಸ್ 53 ಹಾಗೂ ಪಕ್ಷೇತರರು 15 ಸ್ಥಾನ ಗಳಿಸಿದ್ದಾರೆ. ಆದರೆ ಜೋಧ್‌ಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 44 ವಾರ್ಡ್‌ಗಳಲ್ಲಿ ಗೆದ್ದಿರುವುದರಿಂದ ಪಕ್ಷೇತರರ ಬೆಂಬಲ ನಿರ್ಣಾಯಕವಾಗಲಿದೆ.

ಬಿಕಾನೇರ್ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿದೆ. ಒಟ್ಟು 47 ನಗರಸಭೆಗಳಲ್ಲಿ ಬಿಜೆಪಿ 12ರಲ್ಲಿ ಬಹುಮತ ಪಡೆದರೆ, ಕಾಂಗ್ರೆಸ್ 8ರಲ್ಲಿ ಮೇಲುಗೈ ಸಾಧಿಸಿದೆ. ಉಳಿದ 21 ನಗರಸಭೆಗಳಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ.

121 ಪುರಸಭೆಗಳಲ್ಲಿ ಪಕ್ಷೇತರರೇ ಕಿಂಗ್‌ಮೇಕರ್

252 ಪುರಸಭೆಗಳ ಪೈಕಿ ಬಿಜೆಪಿ 66ರಲ್ಲಿ ಬಹುಮತ ಪಡೆದಿದ್ದು, ಕಾಂಗ್ರೆಸ್ 38 ಪುರಸಭೆಗಳಲ್ಲಿ ಬಹುಮತ ಸಾಧಿಸಿದೆ. ಆದರೆ 121 ಪುರಸಭೆಗಳಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದ ಕಾರಣ ಪಕ್ಷೇತರ ಅಭ್ಯರ್ಥಿಗಳ ಪಾತ್ರ ಮಹತ್ವ ಪಡೆದಿದೆ.

ಒಟ್ಟಾರೆ ಫಲಿತಾಂಶವು ರಾಜಸ್ಥಾನದ ನಗರ ರಾಜಕೀಯದಲ್ಲಿ ಬಿಜೆಪಿ ಬಲವನ್ನು ಮತ್ತೊಮ್ಮೆ ತೋರಿಸಿರುವುದರ ಜೊತೆಗೆ, ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ರಚನೆಗೆ ಪಕ್ಷೇತರರ ಬೆಂಬಲವೇ ನಿರ್ಣಾಯಕವಾಗುವ ಪರಿಸ್ಥಿತಿಯನ್ನೂ ಸೃಷ್ಟಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !