hಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಇದರ ಪರಿಣಾಮ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಬೆಂಗಳೂರಿನಲ್ಲೂ ನಿನ್ನೆ ಮಂಗಳವಾರದಿಂದ ಮೋಡ ಕವಿದ ವಾತಾವರಣವಿದೆ.ಇಂದು ಬೆಳಗ್ಗೆ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಚಳಿಯ ಜೊತೆ ಮಳೆಯ ಮುನ್ಸೂಚನೆಯಿದೆ.
ತಮಿಳುನಾಡಿನ ಮೈಲಾಡುತುರೈ, ನಾಗಪಟ್ಟಣಂ, ತಿರುವಾರುರ್ ಮತ್ತು ಕರೈಕಲ್ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಹವಾಮಾನ ಕೇಂದ್ರ ರೆಡ್ ಅಲರ್ಟ್ ನೀಡಿದೆ. ಜೊತೆಗೆ ಕಡಲೂರು, ಮಯಿಲದುತ್ತುರೈ ಮತ್ತು ಕರೈಕಲ್ ಜಿಲ್ಲೆಗಳಲ್ಲಿ ಬುಧವಾರದವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮುಂದಿನ 24 ಗಂಟೆಗಳಲ್ಲಿ ವಾಯುವ್ಯ ದಿಕ್ಕಿಗೆ ಗಾಳಿ ಬಲಗೊಳ್ಳುವ ಸಾಧ್ಯತೆ ಇದೆ. ಚಂಡಮಾರುತ ಶ್ರೀಲಂಕಾ ಮತ್ತು ತಮಿಳುನಾಡು ಕರಾವಳಿಯ ಉತ್ತರ ಮತ್ತು ವಾಯುವ್ಯ ದಿಕ್ಕಿನೆಡೆಗೆ ಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ವಾಡಿಕೆಯಂತೆ ಡಿಸೆಂಬರ್ ಎರಡನೇ ವಾರ ಚಳಿ ತೀವ್ರವಾಗುತ್ತಿತ್ತು. ಆದರೆ, ಈ ಬಾರಿ ನವೆಂಬರ್ ನಲ್ಲಿ ಚಳಿಯ ಪ್ರಮಾಣ ಹೆಚ್ಚಳವಾಗಿದೆ. ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ. ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ಚಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿಗೂ ಮಳೆ ಮುನ್ಸೂಚನೆ ನೀಡಲಾಗಿದೆ. ಆದರೆ ಹವಾಮಾನ ವೈಪರೀತ್ಯ ಕಾರಣ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮೈಕೊರೆಯುವಂತಹ ಚಳಿ ಇರಲಿದೆ.
ಮುಂಬರುವ ವಾರಗಳಲ್ಲಿ ತಾಪಮಾನ ಇನ್ನಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಐಎಂಡಿ ಬೆಂಗಳೂರಿನ ವಿಜ್ಞಾನಿ ಸಿಎಸ್ ಪಾಟೀಲ್, ನಗರದ ಕನಿಷ್ಠ ತಾಪಮಾನವು 12-14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು ಎಂದು ಹೇಳಿದ್ದಾರೆ. ಬೀದರ್‌ನಂತಹ ಉತ್ತರದ ಜಿಲ್ಲೆಗಳಲ್ಲಿ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಬಹುದು. ಇಂತಹ ಮುನ್ಸೂಚನೆಗಳು ಕರ್ನಾಟಕವು ಈ ವರ್ಷ ಅಸಾಮಾನ್ಯವಾದ ಚಳಿಯನ್ನು ಅನುಭವಿಸಬಹುದು ಎಂದು ಸೂಚಿಸುತ್ತದೆ.