October 10, 2026
Saturday, October 10, 2026
spot_img

ದುಪ್ಪಟ್ಟು ಹಣದ ಆಮಿಷ: ಯಲ್ಲಾಪುರದ ನಿವಾಸಿಗೆ 12 ಲಕ್ಷ ರೂ. ವಂಚನೆ

ಹೊಸದಿಗಂತ ವರದಿ,ಯಲ್ಲಾಪುರ :

12 ಲಕ್ಷ ರೂ. ಹೂಡಿಕೆ ಮಾಡಿದರೆ ಒಂದು ವಾರದಲ್ಲಿ 1 ಕೋಟಿ ರೂ ಲಾಭ ನೀಡುವುದಾಗಿ ನಂಬಿಸಿ ಮೋಸ ಮಾಡಿರುವ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಜಂಬೇಸಾಲ ನಿವಾಸಿ ಪ್ರಮೋದ್ ಶಿವರಾಮ ಹೆಗಡೆ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಧಾರವಾಡ ನಿವಾಸಿ ಹೇಮಾವತಿ ಜಯಪ್ರಕಾಶ್ ಸೇರಿದಂತೆ ಹೈದರಾಬಾದ್ ಮೂಲದ ಅನುಶ್ರೀ ಎಂಟರ್‌ಪ್ರೈಸಸ್ ಸಂಸ್ಥೆಯ ಕಾರ್ಡ್ ಹೋಲ್ಡರ್ ಸಿಮ್‌ಸನ್ ಹಾಗೂ ಸಿಬ್ಬಂದಿಗಳಾದ ಹರ್ಷ ಶಿರಸಿ ಮತ್ತು ರಕ್ಷಿತಾ ವಿರುದ್ಧ ಆರೋಪ ಕೇಳಿಬಂದಿದೆ.

ಒಂದು ವಾರದೊಳಗೆ 1 ಕೋಟಿ ನೀಡುವ ಆಫರ್

ಆರೋಪಿತೆ ಹೇಮಾವತಿ ಪರಿಚಯ ಮಾಡಿಕೊಂಡು ವಿಶ್ವಾಸಗಳಿಸಿ 2025ರ ಅಕ್ಟೋಬ‌ರ್ 30ರಂದು ದೂರವಾಣಿ ಮೂಲಕ ಸಂಪರ್ಕಿಸಿ, ಲಾಭದಾಯಕ ವ್ಯವಹಾರವೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಒಂದು ವಾರದೊಳಗೆ 1 ಕೋಟಿ ಟ್ರೇಡ್ ಪ್ರಾಫಿಟ್ ಫಂಡ್ ನೀಡುವುದಾಗಿ ಹೇಳಿದ್ದರು. ತಕ್ಷಣ 12 ಲಕ್ಷ ಹಣವನ್ನು ಹೈದರಾಬಾದ್‌ನ ಅನುಶ್ರೀ ಎಂಟರ್‌ಪ್ರೈಸಸ್‌ ಕಂಪನಿಯ ಖಾತೆಗೆ ವರ್ಗಾವಣೆ ಮಾಡುವಂತೆ ಸೂಚಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಣ ಕೇಳಿದ್ದಕ್ಕೆ ಜೀವ ಬೆದರಿಕೆ

ಯುಕೇ ಸೌಹಾರ್ದ ಸಹಕಾರಿ ಸಂಘದ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯ ಖಾತೆಯಿಂದ ಐಸಿಐಸಿಐ ಬ್ಯಾಂಕ್ ಹೈದರಾಬಾದ್ ಶಾಖೆಯ ಖಾತೆಗೆ 12 ಲಕ್ಷ ರೂ ಹಣ ವರ್ಗಾವಣೆ ಮಾಡಲಾಗಿದೆ. ನಂತರ ಹಣ ವಾಪಸ್ ನೀಡುವ ವಿಚಾರದಲ್ಲಿ ಆರೋಪಿತರು ಹಲವು ಬಾರಿ ಸಮಯ ಕೇಳಿದ್ದು, ಬಳಿಕ ಕಂಪನಿಯಿಂದ ತಾನೂ ಮೋಸ ಹೋಗಿದ್ದೇನೆ ಎಂದು ಆರೋಪಿತೆ ಹೇಮಾವತಿ ಹೇಳಿಕೊಂಡಿದ್ದಾಳೆ. ನಂತರ ಹಣ ಕೇಳಿದಾಗ ನಿಮ್ಮ ಲಾಭಕ್ಕಾಗಿ ನೀವು ಹಣ ಹೂಡಿಕೆ ಮಾಡಿದ್ದೀರಿ, ನನಗೆ ಸಂಬಂಧವಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Must Read