ಮಾದಿಗರ ಒಳಮೀಸಲಾತಿ ವಿಷಯ ನಿರ್ಲಕ್ಷ್ಯಿಸಿದರೆ ಹೋರಾಟದ ಎಚ್ಚರಿಕೆ

 

ಹೊಸ ದಿಗಂತ ವರದಿ,ಬಳ್ಳಾರಿ:

ರಾಜ್ಯ ಸರ್ಕಾರ ಮಾದಿಗ ಒಳ ಮೀಸಲಾತಿ ಕುರಿತು ಡಿ.30ರೊಳಗೆ ಕೇಂದ್ರಕ್ಕೆ ಅಭಿಪ್ರಾಯ ತಿಳಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ರಾಬವಿಕೋ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ ಅವರು ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. “ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಎಲ್ಲ ನಾಯಕರು ಕಳೆದ ಚುನಾವಣೆಯಲ್ಲಿ ಸಮುದಾಯದವರಿಗೆ ಭರವಸೆ ನೀಡಿದ್ದರು, ಜೊತೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಈ ಕುರಿತು ಘೋಷಿಸಿದ್ದರು. ಆದರೆ, ಸುಳ್ಳು ಗ್ಯಾರಂಟಿಗಳ ಮೂಲಕ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಇಲ್ಲಿವರೆಗೆ ಈ ಕುರಿತು ಮಾತನಾಡುತ್ತಿಲ್ಲ. ಮೊದಲ ಸಂಪುಟದಲ್ಲೇ ತೀರ್ಮಾನ ಎಂದರೂ ಇಲ್ಲಿವರೆಗೆ ಕ್ರಮವಿಲ್ಲ. ಎರಡು ಅಧಿವೇಶನ ನಡೆದಿದ್ದು, ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳು ಕಳೆದರೂ ಇಲ್ಲಿವರೆಗೆ ಕ್ರಮವಿಲ್ಲ. ಕೂಡಲೇ ರಾಜ್ಯ ಸರ್ಕಾರ ಒಳ ಮಿಸಲಾತಿ ಕುರಿತು ಕೇಂದ್ರಕ್ಕೆ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು. ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ” ಎಂದು ಎಚ್ಚರಿಸಿದರು.
“ಒಳಮಿಸಲಾತಿ ಕುರಿತು ಮತ್ತೆ ರಾಜ್ಯ ಮಟ್ಟದ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ರಾಜ್ಯದ ಪ್ರತಿ ಗ್ರಾಮದಿಂದ 4 ಜನ ಮುಖಂಡರನ್ನು ಗುರುತಿಸಿ, ಜಿಲ್ಲಾ ಮಟ್ಟದ ಸಮಾವೇಶವನ್ನು ನಡೆಸಲಾಗುವುದು. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಸಮಾವೇಶ ನಡೆದಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ನಡೆಯಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಡಿ.18ರಂದು ನಗರದ ಬಿಡಿಎ ಸಭಾಂಗಣದಲ್ಲಿ ‘ಜಿಲ್ಲಾ ಮಟ್ಟದ ಮಾದಿಗರ ಆತ್ಮಗೌರವ ಸಮಾವೇಶ ನಡೆಸಲಾಗುತ್ತಿದೆ” ಎಂದವರು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಮೇಕಲ ವಿರೇಶ್, ಎಂ.ನಸರಪ್ಪ, ರಾಜೇಶ್, ಪರಮೇಶ್, ಅರುಣಾಚಲ, ಷಣ್ಮುಖ, ಚಂದ್ರು ಇತರರಿದ್ದರು. ಜಿಲ್ಲಾ ಮಟ್ಟದ ಮಾದಿಗರ ಆತ್ಮಗೌರವ ಸಮಾವೇಶದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!