ಮಡಿಕೇರಿ: ಜು.3ಕ್ಕೆ ಶಿಶುನಾಳ ಷರೀಫರ ತತ್ತ್ವಪದ‌ ಆಧಾರಿತ ಕಾರ್ಯಕ್ರಮ

ಹೊಸದಿಗಂತ ವರದಿ, ಮಡಿಕೇರಿ:
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜುಲೈ 3ರಂದು ಶಿಶುನಾಳ ಶರೀಫರ ತತ್ತ್ವಪದಗಳನ್ನು ಆಧಾರಿತ ತತ್ತ್ವರಸಾಯನ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಭಾಗವಹಿಸಲಿಚ್ಛಿಸುವ ಕಲಾವಿದರ ಅಯ್ಕೆ ಪ್ರಕ್ರಿಯೆ ಜೂ.18 ಹಾಗೂ 19ರಂದು ನಡೆಯಲಿದೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು 107 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ಹಿನ್ನೆಲೆಯಲ್ಲಿ ತತ್ತ್ವರಸಾಯನ ಎನ್ನುವ ಶೀರ್ಷಿಕೆಯಲ್ಲಿ ಸಂತ ಶಿಶುನಾಳ ಶರೀಫರ ತತ್ತ್ವಪದಗಳ ಆಧಾರಿತ ಸಂಗೀತ-ನೃತ್ಯ ಕಾರ್ಯಕ್ರಮ ಜುಲೈ 3 ರಂದು ಸಂಜೆ 4 ರಿಂದ 7ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನ, ಶ್ರೀ ಶಾರದ ವಿದ್ಯಾಪೀಠ ಕೈಜೋಡಿಸಿವೆ.
ಜುಲೈ 3 ಸಂತ ಶಿಶುನಾಳ ಶರೀಫರು ಹುಟ್ಟಿದ ದಿನ ಹಾಗೂ ಅವರ ದೇಹಾಂತ್ಯದ ದಿನವೂ ಆಗಿದೆ. ಈ ದಿನವನ್ನು ‘ಭಾವೈಕ್ಯತೆಯ ದಿನ’ ಎಂದು ಆಚರಿಸಲಾಗುತ್ತಿದ್ದು, ಆ ದಿನ ಸಂತ ಶಿಶುನಾಳ ಶರೀಫರ ತತ್ತ್ವಪದಗಳ ಆಧಾರಿತ ಸಂಗೀತ, ನೃತ್ಯ ಮೂಲಕ ಅರ್ಥಪೂರ್ಣ ಕಾಯಕ್ರಮ ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಆಸಕ್ತ ಕಲಾವಿದರನ್ನು, ಜಾನಪದ ಕಲಾತಂಡದವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಹೊಸಬರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಜೂ.18 ರಂದು ಬೆಳಗ್ಗೆ 9 ಗಂಟೆಯಿಂದ ತತ್ತ್ವಪದಗಳ ಗಾಯಕರಿಗೆ ಮತ್ತು ಜೂನ್ 19 ರಂದು ಬೆಳಗ್ಗೆ 9 ಗಂಟೆಯಿಂದ ನೃತ್ಯ ತಂಡದವರಿಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಆಸಕ್ತ ಸಂಗೀತ ಕಲಾವಿದರು, ನೃತ್ಯ ತಂಡದವರು ನೇರವಾಗಿ ಜೂ.18, 19ರಂದು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಗಾಯನ / ನೃತ್ಯದ ಅನುಭವದ ವಿವರಣೆಗಳುಳ್ಳ ಸ್ವ-ವಿವರಗಳನ್ನೊಳಗೊಂಡ ಅರ್ಜಿಯೊಂದಿಗೆ ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560 018 ಇಲ್ಲಿ ಹಾಜರಾಗಬಹುದಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!