ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ. ನರಸೀಪುರದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದ ವಿವಾದ ದಿನದಿಂದ ದಿನಕ್ಕೆ ಜೋರಾಗಿದ್ದು, ಇದೀಗ ಹಿಂದೂ ಜಾಗರಣ ವೇದಿಕೆ ಪೊಲೀಸ್ ಠಾಣೆಯಿಂದ ಸುಮಾರು 200 ಮೀಟರ್ ದೂರದಲ್ಲೇ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿ, ಇನ್ಸ್‌ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು ಹೊಡೆದಿದ್ದಾರೆ.
ಅಷ್ಟೇ ಅಲ್ಲದೆ ಸೆಪ್ಟೆಂಬರ್ 18ರಂದು ಲಿಂಕ್ ರಸ್ತೆಯಲ್ಲಿ ಹಿಂದೂ ಶೋಭಾಯಾತ್ರೆ ನಡೆಸಲು ಸಂಘಟನೆ ನಿರ್ಧರಿಸಿದ್ದು, ಸುಮಾರು 5 ಸಾವಿರ ಮಂದಿ ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಕೇವಲ ಮೈಸೂರಿನವರು ಮಾತ್ರವಲ್ಲ ರಾಜ್ಯದ ವಿವಿಧ ಭಾಗಗಳಿಂದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಮಹೇಶ್ ತಿಳಿಸಿದ್ದಾರೆ.
ಇದನ್ನೂ ಓದಿ:
ಏನಿದು ಘಟನೆ?
ಟಿ. ನರಸೀಪುರದಲ್ಲಿ ಮಸೀದಿ ಮುಂಭಾಗದಿಂದ ಗಣೇಶೋತ್ಸವ ಮೆರವಣಿಗೆ ಸಾಗದಂತೆ ಹಾಗು ಪಟಾಕಿ ಹಚ್ಚದಂತೆ ಇನ್ಸ್‌ಪೆಕ್ಟರ್ ಧನಂಜಯ್ ತುಂಬಾ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದರು. ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸುವಂತೆ ಬಿಜೆಪಿ ಪ್ರತಿಭಟನೆ ನಡೆಸಿದರೆ, ಇನ್ಸ್‌ಪೆಕ್ಟರ್ ಪರ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆ ಗಣೇಶೋತ್ಸವದ ಮೆರವಣಿಗೆ ಹಾಗೂ ಸೆ.18ರ ಶೋಭಾಯಾತ್ರೆಗೆ ಸಂಬಂಧಿಸಿದಂತೆ ಎರಡೂ ಕಡೆಗಳಿಂದ ಹೇಳಿಕೆಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ, ಟಿ. ನರಸೀಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದೇ ಪೊಲೀಸರಿಗೆ ದೊಡ್ಡ ತಲೆಬಿಸಿಯಾಗಿದೆ.



