July 20, 2026
Monday, July 20, 2026
spot_img

ತ್ರಿಪುರಾ ಪೊಲೀಸ್ ಇಲಾಖೆಯಲ್ಲಿ ಮಹಾಘಾತ: DGP ಅನುರಾಗ್ ಧನಕರ್ ಶವವಾಗಿ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತ್ರಿಪುರಾ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಆಗಿರುವ ಅನುರಾಗ್ ಧನಕರ್ ಅವರು ಅಗರ್ತಲಾದಲ್ಲಿರುವ ಮುಖ್ಯ ಕಚೇರಿಯ ತಮ್ಮ ಅಧಿಕೃತ ಚೇಂಬರ್‌ನಲ್ಲೇ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ (ಜುಲೈ 20) ಮುಂಜಾನೆ ಎಂದಿನಂತೆ ಕಚೇರಿಗೆ ಬಂದಿದ್ದ ಧನಕರ್ ಅವರ ಕೊಠಡಿಯಿಂದ ಕೆಲವೇ ಸಮಯದ ನಂತರ ದಿಢೀರನೆ ಗುಂಡು ಹಾರಿದ ಶಬ್ದ ಕೇಳಿಬಂದಿದೆ. ಆತಂಕಗೊಂಡ ಸಿಬ್ಬಂದಿ ತಕ್ಷಣ ಒಳಗೆ ಧಾವಿಸಿದಾಗ, ಡಿಜಿಪಿಯವರು ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಅವರು ತಮ್ಮದೇ ಸೇವಾ ಪಿಸ್ತೂಲ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಆಸ್ಪತ್ರೆಗೆ ತಲುಪುವಷ್ಟರಲ್ಲೇ ಪ್ರಾಣಪಕ್ಷಿ ಹಾರಿತು

ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಧನಕರ್ ಅವರನ್ನು ಕಚೇರಿ ಸಿಬ್ಬಂದಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ದುರದೃಷ್ಟವಶಾತ್ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಪಾಸಣೆ ನಡೆಸಿ ಘೋಷಿಸಿದ್ದಾರೆ. ಈ ಆಕಸ್ಮಿಕ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ರಾಜ್ಯ ಪೊಲೀಸ್ ಇಲಾಖೆ ತಲ್ಲಣಗೊಂಡಿದೆ.

ಸ್ಥಳಕ್ಕೆ ಧಾವಿಸಿದ ವಿಧಿವಿಜ್ಞಾನ ತಂಡ: ತನಿಖೆ ತೀವ್ರ

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ (Forensic) ತಜ್ಞರ ತಂಡ ಭೇಟಿ ನೀಡಿದ್ದು, ಸೂಕ್ಷ್ಮ ಪುರಾವೆಗಳನ್ನು ಕಲೆಹಾಕುತ್ತಿದೆ. ಧನಕರ್ ಅವರು ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ವೃತ್ತಿಜೀವನದ ಒತ್ತಡ ಕಾರಣವೇ ಅಥವಾ ವೈಯಕ್ತಿಕ ಸಮಸ್ಯೆಗಳಿದ್ದವೇ ಎಂಬ ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ಈಗ ಗಂಭೀರ ತನಿಖೆ ಆರಂಭಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !