Friday, September 29, 2023

Latest Posts

ಅಳಬೇಡ ಸುಮ್ಮನಿರು ಎಂದು ಮಗುವಿಗೆ ಮದ್ಯ ಕುಡಿಸಿದ ತಂದೆ-ಅಜ್ಜ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಳುತ್ತಿದ್ದ ಕಂದಮ್ಮನನ್ನು ಸಂತೈಸಲು ತಂದೆ ಹಾಗೂ ಅಜ್ಜ ಇಬ್ಬರೂ ಸೇರಿ ಮಗುವಿಗೆ ಮದ್ಯವನ್ನು ಕುಡಿಸಿದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.

ಹೂಗ್ಲಿಯ ಪಾಂಡುವಾದ ಐಚ್ ಗಢ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲು ತಂದೆ-ತಾತ ಸೇರಿ ಮಗುವಿಗೆ ಮದ್ಯ ಕುಡಿಸಿದ್ದು, ಮಗು ಪ್ರಜ್ಞೆ ತಪ್ಪಿದೆ. ಮಗುವಿಗೆ ಪ್ರಜ್ಞೆ ಬಂದ ಬಳಿಕ ಮಗುವಿನ ತಾಯಿ ದೂರು ನೀಡಿದ್ದು, ಅದರ ಅನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಇಬ್ಬರು ಆರೋಪಿಗಳಿಗೆ 14 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಕುಡಿದು ಮನೆಗೆ ಬಂದ ಮಗುವಿನ ತಂದೆ ಪತ್ನಿ ಜೊತೆ ಜಗಳವಾಡಿ ಪತ್ನಿಯನ್ನು ಮನೆಯಿಂದ ಆಚೆ ಹಾಕಿ ಬಾಗಿಲು ಬಂದ್ ಮಾಡಿದ್ದಾನೆ. ಈ ಗಲಾಟೆಯಿಂದ ಮಲಗಿದ್ದ ಮಗು ಎದ್ದು ಅಳಲು ಆರಂಭಿಸಿದೆ. ಮಗು ಅಳುತ್ತಿದ್ದರೂ ತಾಯಿಗೆ ಬಾಗಿಲು ತೆಗೆದಿಲ್ಲ. ಮಗುವನ್ನು ಸುಮ್ಮನಿರಿಸಲು ಹರಸಾಹಸ ಪಟ್ಟ ತಂದೆ-ಅಜ್ಜ ಇಬ್ಬರು ಮಗುವಿಗೆ ಮದ್ಯ ಕುಡಿಸಿದ್ದಾರೆ. ಗಲಾಟೆಯಿಂದ ಅಕ್ಕಪಕ್ಕದ ಮನೆಯವರು ಬಂದು ಮನೆ ಬಾಗಿಲು ಒಡೆದು ಮಗು ರಕ್ಷಿಸಿದ್ದಾರೆ. ಆದರೆ ಮದ್ಯ ಕುಡಿದ ಮಗು ಪ್ರಜ್ಞೆ ತಪ್ಪಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಗು ಚೇತರಿಸಿಕೊಳ್ಳುತ್ತಿದ್ದಂತೆ ಅಕ್ಕ-ಪಕ್ಕದ ಮನೆಯವರು ಹಾಗೂ ಮಗುವಿನ ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ನೀಡಿದ್ದರು. ದೂರಿನ ಅನ್ವಯ ಕುಡುಕ ತಂದೆ ಹಾಗೂ ಅಜ್ಜನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!