May 15, 2026
Friday, May 15, 2026
spot_img

ಸುಳ್ಯ ಸರ್ಕಾರಿ ಬಸ್ ನಿಲ್ದಾಣದ ಬಳಿ ವ್ಯಕ್ತಿ ಸಾ*ವು: ಪತ್ತೆಯಾದ ಬ್ಯಾಗ್‌ಗಳಲ್ಲಿದೆ ನಿಗೂಢ ಮಾಹಿತಿ?

ಹೊಸದಿಗಂತ ಸುಳ್ಯ:

ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ವ್ಯಕ್ತಿಯೋರ್ವರು ಮಲಗಿದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಈ ವ್ಯಕ್ತಿಯು ಸರ್ಕಾರಿ ಬಸ್ ನಿಲ್ದಾಣದ ಬಳಿ ಅತ್ಯಂತ ಕ್ಷೀಣಿಸಿದ ಸ್ಥಿತಿಯಲ್ಲಿ ನಡೆದಾಡುತ್ತಿದ್ದರು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತೀವ್ರವಾದ ಬಿಸಿಲಿನ ತಾಪ ಮತ್ತು ದೈಹಿಕ ಅಶಕ್ತತೆಯಿಂದಾಗಿ ಅವರು ಸಮೀಪದ ಖಾಸಗಿ ಹೋಟೆಲ್ ಒಂದರ ಬಳಿ ವಿಶ್ರಾಂತಿಗೆಂದು ಮಲಗಿದ್ದರು ಎನ್ನಲಾಗಿದೆ.

ಬಹಳ ಹೊತ್ತಾದರೂ ವ್ಯಕ್ತಿ ಚಲನವಲನ ಇಲ್ಲದೆ ಮಲಗಿರುವುದನ್ನು ಕಂಡ ಸಾರ್ವಜನಿಕರು ತಕ್ಷಣ ಆಂಬ್ಯುಲೆನ್ಸ್ ಚಾಲಕರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಚಾಲಕರು ಪರಿಶೀಲಿಸಿದಾಗ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟಿದೆ. ಕೂಡಲೇ ಸ್ಥಳೀಯ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದ್ದು, ಪೊಲೀಸರ ಮಾರ್ಗದರ್ಶನದಂತೆ ಮೃತದೇಹವನ್ನು ಸುಳ್ಯ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮೃತದೇಹದ ಬಳಿ ಎರಡು ಬ್ಯಾಗ್‌ಗಳು ಪತ್ತೆಯಾಗಿದ್ದು, ಅದರಲ್ಲಿರುವ ದಾಖಲೆಗಳ ಮೂಲಕ ಮೃತರ ವಿಳಾಸ ಮತ್ತು ಹಿನ್ನೆಲೆ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಅತಿಯಾದ ಬಿಸಿಲು ಅಥವಾ ಅನಾರೋಗ್ಯ ಸಾವಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ನಿಖರ ಮಾಹಿತಿ ಹೊರಬರಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !