ಮನುಷ್ಯ ತಾನು ನಡೆದು ಬಂದ ದಾರಿ ಮರೆಯಬಾರದು: ಮಾತ ಮಂಜಮ್ಮ ಜೋಗತಿ

ಹೊಸದಿಗಂತ ವರದಿ, ಚಿತ್ರದುರ್ಗ:

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ಮಹತ್ವದ ಸ್ಥಾನ ಪಡೆದರೂ ತಾನು ನಡೆದು ಬಂದ ಹಾದಿಯನ್ನು ಮರೆಯಬಾರದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತ ಮಂಜಮ್ಮ ಜೋಗತಿ ಕಿವಿಮಾತು ಹೇಳಿದರು.
ಜಿಲ್ಲಾ ಮದಕರಿ ನಾಯಕ ವಿದ್ಯಾ ಸಂಸ್ಥೆ ಚಿತ್ರದುರ್ಗ ಹಾಗೂ ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಮಹಾರಾಣಿ ಕಾಲೇಜಿನ ಮಹರ್ಷಿ ವಾಲ್ಮೀಕಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮನುಷ್ಯ ಜೀವನದಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಎಲ್ಲರೂ ಸಮಾನರು. ಹಾಗಾಗಿ ಪರಸ್ಪರರನ್ನು ಗೌರವಿಸಿ ನಮಸ್ಕರಿಸಿದಾಗ ಮನುಷ್ಯನ ಆತ್ಮದಲ್ಲಿರುವ ಪರಮಾತ್ಮ ನಮ್ಮನ್ನು ಆಶೀರ್ವದಿಸುತ್ತಾನೆ. ಮನುಷ್ಯ ಜೀವನದಲ್ಲಿ ತಾನು ಹತ್ತಿದ ಮೆಟ್ಟಿಲು, ಸವೆಸಿದ ದಾರಿಯನ್ನು ಮರೆಯಬಾರದು. ಯಾವುದೇ ಕಾರಣಕ್ಕೂ ತಂದೆ-ತಾಯಿಯ ಮನಸ್ಸನ್ನು ನೋಯಿಸಬಾರದು. ನಮ್ಮ ಒತ್ತು ಹೆತ್ತು, ಸಾಕಿ ಸಲಹಿ, ಶಿಕ್ಷಣ ಕೊಡಿಸುವಲ್ಲಿ ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಇಂದು ನಾವೇನಾದರೂ ಆಗಿದ್ದಲ್ಲಿ ಅದಕ್ಕೆ ನಮ್ಮ ತಂದೆ-ತಾಯಿಯ ಪರಿಶ್ರಮ ಕಾರಣ ಎಂದರು.
ವಿದ್ಯಾರ್ಥಿಗಳು ಸಮಯಕ್ಕೆ ಬೆಲೆ ಕೊಡಬೇಕು. ಸಮಯ ಪಾಲನೆ ಮಾಡಬೇಕು. ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು. ಗುರುಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಹರ ಮುನಿದರೆ ಗುರು ಕಾಯ್ವನು, ಗುರು ಮುನಿದರೆ ಯಾರೂ ಕಾಯಲರಿಯರು ಎಂಬ ಮಾತಿನಂತೆ ಗುರುವು ತೋರಿದ ದಾರಿಯಲ್ಲಿ ನಡೆಯಬೇಕು. ಗುರುಗಳನ್ನು ದಿಕ್ಕರಿಸಿ ಹೋದ ನಾನು ಏನೆಲ್ಲಾ ಕಷ್ಟನಷ್ಟಗಳನ್ನು ಅನುಭವಿಸಿದೆ. ನಂತರ ಗುರುವಿಗೆ ಶರಣಾದ ಪರಿಣಾಮ ನಾನು ಇಂದು ಈ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿದರು.
ವಿದ್ಯಾರ್ಥಿಗಳಾದ ನೀವು ತೃತೀಯು ಲಿಂಗಿಗಳನ್ನು ಕಡೆಗಣ್ಣಿನಿಂದ ಕಾಣಬೇಡಿ. ಅವರಿಗೂ ನಿಮ್ಮಂತೆ ಬದುಕಲು ಅವಕಾಶ ಮಾಡಿಕೊಡಿ. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ದೊರೆಯುತ್ತಿವೆ. ಇದರಿಂದ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಲ್ಲಿ ತೃತೀಯ ಲಿಂಗಿಗಳು ಕೆಲಸ ಮಾಡುವ ಅವಕಾಶ ಲಭಿಸಿದೆ. ಅವರಿಗೂ ಶಿಕ್ಷಣ ದೊರೆತಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಹಾಗಾಗಿ ಅವರಿಗೆ ಶಿಕ್ಷಣ ನೀಡಬೇಕು ಎಂದರು.
ನಾನು ಯಾವುದೇ ಕಾಲೇಜು ಮೆಟ್ಟಿಲುಗಳನ್ನು ಹತ್ತಿಲ್ಲ. ಆದರೆ ಈಗ ಅನೇಕ ಕಾಲೇಜುಗಳಿಗೆ ಕರೆದು ನನ್ನನ್ನು ಸನ್ಮಾನಿಸಲಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಪಠ್ಯಪುಸ್ತಕದಲ್ಲಿ ನನ್ನ ವಿಷಯ ಓದುತ್ತಿದ್ದಾರೆ. ನೀವು ಮಾಡುವ ಕೆಲಸದಲ್ಲಿ ಶ್ರದ್ಧಾ ಭಕ್ತಿ ಇರಲಿ. ಸಾಧನೆ ತಾನಾಗೇ ಒಲಿಸಯುತ್ತದೆ. ನಾನು ಜಾನಪದ ಕಲೆ ಆಯ್ದುಕೊಂಡು ಕೆಲಸ ಮಾಡಿದೆ. ಇದರಿಂದ ಪ್ರಶಸ್ತಿ ಬಂತು. ಕೇಂದ್ರ ಸರ್ಕಾರ ನೀಡಿದ ಪ್ರಶಸ್ತಿ ನನಗೆ ಬಂದದ್ದಲ್ಲ, ಅದು ಜಾನಪದ ಕಲೆಗೆ ಬಂದದ್ದು ಎಂದು ಪ್ರತಿಪಾದಿಸಿದರು.
ತರಳಬಾಳು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಡಾ.ಅರುಣ್ ಜೋಳದ, ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಎ.ವಿ.ನುಂಕಪ್ಪ ಮಾತನಾಡಿದರು. ಜಿಲ್ಲಾ ಮಕದರಿ ನಾಯಕ ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಎಸ್.ಸಾಗರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತಾ ಮಂಜಮ್ಮ ಜೋಗತಿ ಹಾಗೂ ಯುಪಿಎಸ್‌ಸಿ ಟಾಪರ್ ಮಹಮದ್ ಸಿದ್ದಿಕಿ ಷರೀಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆ.ಉಷಾಕಿರಣ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಡಿ.ಆರ್.ರಂಗಸ್ವಾಮಿ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!