ಮಣಿಪುರ ಹಿಂಸೆ ನಾಚಿಕೆಗೇಡು, ಅದರ ಮೇಲೆ ನಡೆದ ರಾಜಕೀಯ ಮತ್ತೂ ಹೀನಾಯ: ಅಮಿತ್ ಶಾ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಮಣಿಪುರದಲ್ಲಿ ಯಾವ ಹಿಂಸಾಚಾರ ನಡೆದಿದೆಯೋ ಅದು ಅತ್ಯಂತ ನಾಚಿಕೆಗೇಡು ಎಂಬುದಾಗಿ ಹೇಳಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಆದರೆ ಈ ಹಿಂಸೆಯನ್ನು ಖಂಡಿಸುವ ಹೆಸರಿನಲ್ಲಿ ನಡೆದ ಹೀನ ರಾಜಕೀಯ ಅದಕ್ಕಿಂತಲೂ ನಾಚಿಕೆಗೇಡಿನದು ಎಂದು ಹೇಳುವ ಮೂಲಕ ಬುಧವಾರ ವಿಪಕ್ಷಗಳನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರಕಾರ ವಿರುದ್ಧ ಲೋಕಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಿತ್ರಕೂಟ ಮಂಡಿಸಿದ ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ ಅವರು,ಮಣಿಪುರದಲ್ಲಿ ನಡೆದ ಹಿಂಸೆಯ ಬಗ್ಗೆ ನನಗೆ ತೀವ್ರ ದುಃಖವಿದೆ.ಇಂತಹ ಘಟನೆಗಳು ನಡೆಯಬಾರದು.ಆ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಸಾಧ್ಯವಿರುವ ಎಲ್ಲವನ್ನೂ ಕೇಂದ್ರ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ.ಆದರೆ ವಿರೋಧಪಕ್ಷಗಳು ಮಣಿಪುರದಲ್ಲಿನ ಹಿಂಸೆಯನ್ನು ತಮ್ಮ ಕ್ಷುದ್ರ ರಾಜಕೀಯಕ್ಕೆ ಬಳಸಿಕೊಂಡಿರುವುದು ಶೋಚನೀಯ. ಆದರೆ ಈಗ ಸಂಸತ್ತಿನಲ್ಲಿ ಚರ್ಚೆಯಾಗಬೇಕೆಂದು ಹೊರಗಡೆ ಹೇಳುತ್ತಾ ಬಂದ ವಿಪಕ್ಷಗಳು ಸಂಸತ್ತಿನಲ್ಲಿ ಚರ್ಚೆಗೆ ಬೆನ್ನು ಹಾಕುತ್ತಿರುವುದು ಖಂಡನೀಯ ಎಂದರು.

ಮಣಿಪುರದಲ್ಲಿ ಇಂದು ನಡೆಯುತ್ತಿರುವ ಹಿಂಸಾಚಾರಗಳಿಗೆ ಇತಿಹಾಸವಿದೆ.ಈಗ ನಡೆದಿರುವ ಹಿಂಸಾಚಾರದ ಹಿಂದೆ ಈ ಐತಿಹಾಸಿಕ ಕಾರಣಗಳು ಕೆಲಸ ಮಾಡಿವೆ.ಆದರೆ ವಿಪಕ್ಷಗಳು ಮಣಿಪುರಕ್ಕೆ ಪ್ರಧಾನಿ ಮೋದಿಯವರು ಹೋಗಿಲ್ಲ ಎಂದು ದೂಷಿಸುತ್ತಿವೆ.ಆದರೆ ಈ ದೇಶದ ಪ್ರಧಾನಿ ಮಧ್ಯರಾತ್ರಿ ೨.೩೦ಕ್ಕೆ ಮತ್ತು ಮತ್ತೆ ಮುಂಜಾನೆ ೬ಗಂಟೆಗೆ ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಾರೆ ಎಂಬುದನ್ನು ವಿಪಕ್ಷಗಳು ಅರಿತಿವೆಯೇ ಎಂದು ಅವರು ಪ್ರಶ್ನಿಸಿದರು.

ಮಣಿಪುರ ಗ್ಯಾಂಗ್ ರೇಪ್ ವಿಡಿಯೋ ಅಧಿವೇಶನ ಮುನ್ನಾದಿನ ಪ್ರಕಟ ಆದ್ದು ಹೇಗೆ ?
ಮಣಿಪುರದಲ್ಲಿ ನಡೆದ ಗ್ಯಾಂಗ್‌ರೇಪ್ ಪ್ರಕರಣದ ತಿಂಗಳ ಬಳಿಕ ಸಂಸತ್ ಅಧಿವೇಶನ ಆರಂಭದ ಮುನ್ನಾದಿನ ಈ ಸಂಬಂಧದ ವಿಡಿಯೋವೊಂದನ್ನು ಹರಿಯಬಿಡಲಾಯಿತು.ಈ ವಿಡಿಯೋವನ್ನು ಯಾಕೆ ಮಣಿಪುರ ಪೊಲೀಸ್ ಮಹಾನಿರ್ದೇಶಕರು ಅಥವಾ ತನಿಖಾ ಸಂಸ್ಥೆಗಳಿಗೆ ನೀಡಲಾಗಿಲ್ಲ ?ಇಂತಹ ಹೀನ ಕೃತ್ಯಗಳಿಗೆ ಸಂಬಂಧಿಸಿ ಪೊಲೀಸರನ್ನು ಯಾಕೆ ಕತ್ತಲಲ್ಲಿರಿಸಲಾಯಿತು? ಎಂಬುದಾಗಿ ವಿಪಕ್ಷಗಳ ನೀಚ ರಾಜಕೀಯವನ್ನು ಎಳೆ ಎಳೆಯಾಗಿ ಲೋಕಸಭೆಯಲ್ಲಿ ಬಿಚ್ಚಿಟ್ಟರು.ಆದರೆ ವಿಡಿಯೋ ಬಹಿರಂಗಗೊಂಡಾಗ ಸರಕಾರ ತಕ್ಷಣವೇ ಕಾರ್ಯಾಚರಿಸಿ , ಆರೋಪಿಗಳನ್ನು ಗುರುತಿಸಿ ಬಂಧಿಸಲಾಯಿತು ಎಂದು ಅವರು ವಿವರಿಸಿದರು.

ಕನಿಷ್ಠ ಶಿಷ್ಟಾಚಾರ ಪಾಲಿಸದ ರಾಹುಲ್
ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಮಣಿಪುರಕ್ಕೆ ಭೇಟಿ ನೀಡುವ ವೇಳೆ ಅಲ್ಲಿದ್ದ ಪರಿಸ್ಥಿತಿಯ ಕಾರಣ ಅವರನ್ನು ಹೆಲಿಕಾಪ್ಟರ್ ಮೂಲಕ ತೆರಳುವಂತೆ ಕೋರಲಾಗಿತ್ತು. ಆದರೆ ಅವರು ತಾನು ರಸ್ತೆ ಮಾರ್ಗವಾಗಿಯೇ ಪ್ರಯಾಣಿಸುವುದಾಗಿ ಹಠ ಹಿಡಿದರು. ತಾನು ಪಕ್ಷದ “ಶಮನ ಸ್ಪರ್ಷ”ಅಭಿಯಾನದ ಭಾಗವಾಗಿ ಎರಡು ದಿನಗಳ ಭೇಟಿ ನೀಡುತ್ತಿರುವುದಾಗಿ ಹೇಳಿಕೊಂಡ ರಾಹುಲ್ ಗಾಂಧಿ ಅಲ್ಲಿನ ಗಂಭೀರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಹಠ ಹಿಡಿದಾಗ ಹಿಂಸಾಕೋರರು ದಾಳಿ ಮಾಡುವ ಅಪಾಯ ತಪ್ಪಿಸಲು ಅವರ ಬೆಂಗಾವಲು ತಂಡವನ್ನು ಪೊಲೀಸರು ಬಿಷ್ಣುಪುರದಲ್ಲಿ ತಡೆದರು ಎಂದು ಅಮಿತ್ ಶಾ ವಿವರಿಸಿದರು.

13 ಬಾರಿ ಲಾಂಚಿಂಗ್ ಯತ್ನಗಳು ನಡೆದರೂ ರಾಹುಲ್ ವಿಫಲ !
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ರಾಜಕೀಯದಲ್ಲಿ ಮೇಲಕ್ಕೆತ್ತಲು 13 ಬಾರಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿದರೂ ಕಾಂಗ್ರೆಸ್ ಅಷ್ಟೂ ಬಾರಿ ವಿಫಲವಾಗಿದೆ ಎಂದು ಅಮಿತ್ ಶಾ ಬೊಟ್ಟು ಮಾಡಿದರು. ಈ ಮೂಲಕ ರಾಹುಲ್ ಗಾಂಧಿಯನ್ನು ಜನಪ್ರಿಯಗೊಳಿಸಲು ಕಾಂಗ್ರೆಸ್ ನಡೆಸುತ್ತಿರುವ ತಂತ್ರಗಳನ್ನು ಲೇವಡಿಗೈದರು.

ವಿಪಕ್ಷ ನಾಯಕರೊಬ್ಬರನ್ನು ನಾಯಕನೆಂದು ಬಿಂಬಿಸಲು 13 ಬಾರಿ ವೈಭವೀಕರಿಸುವ ಪ್ರಯತ್ನಗಳನ್ನು ನಡೆಸಲಾಯಿತು. ಆದರೆ 13 ಬಾರಿಯೂ ಈ ಪ್ರಯತ್ನ ವಿಫಲವಾಗಿದೆ ಎಂಬುದಾಗಿ ರಾಹುಲ್ ಗಾಂಧಿ ಹೆಸರು ಹೇಳದೆಯೇ ಅಮಿತ್ ಶಾ ಲೋಕಸಭೆಯಲ್ಲಿ ಹೇಳಿದರು.

ರಾಹುಲ್‌ ಗಾಂಧಿ ಯಾವತ್ಮಾಲ್ ಜಲ್ಕಾ ಗ್ರಾಮದ ರೈತ ವಿಧವೆ ಮಹಿಳೆ ಕಲಾವತಿ ಬಂದೂರ್‌ಕರ್ ನಿವಾಸಕ್ಕೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದರು. ಲೋಕಸಭೆಯಲ್ಲಿ ತನ್ನ ಭಾಷಣದಲ್ಲಿ, ಅವರ ಪತಿ ಪರಶುರಾಮ ಬಂದೂರ್‌ಕರ್ ಕೃಷಿಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಉಲ್ಲೇಖಿಸಿದ್ದರು ರಾಹುಲ್. ಆದರೆ ರಾಹುಲ್ ಅವರ ಹೆಸರು ಉಲ್ಲೇಖಿಸದರೇ ಹೊರತಾಗಿ, ಅವರ ಬದುಕಿಗೆ ಕಾಂಗ್ರೆಸ್ ಯಾವುದೇ ನೆರವು ನೀಡಲಿಲ್ಲ. ಬದಲಿಗೆ ಬಿಜೆಪಿಯೇ ಅವರ ಬದುಕನ್ನು ಉತ್ತಮಗೊಳಿಸಲು ನೆರವಾಗಿದ್ದನ್ನು ಅಮಿತ್ ಶಾ ಬಹಿರಂಗಪಡಿಸಿದರು.

ಕಲಾವತಿಯವರಿಗಾಗಿ ನೀವು ಏನು ಮಾಡಿದಿರಿ?ಅವರಿಗೆ ಮನೆ, ಪಡಿತರ , ವಿದ್ಯುತ್ ಸೌಲಭ್ಯವನ್ನು ಒದಗಿಸಿಕೊಟ್ಟದ್ದು ಮೋದಿ ಸರಕಾರ . ಇಂದು ಅದೇ ಕಲಾವತಿಯವರು ತೆರಿಗೆ ಪಾವತಿದಾರರು ಎಂದು ಹೇಳಿದರು. ಈ ಮೂಲಕ ಕಾಂಗ್ರೆಸ್ ಬಡವರ ಹೆಸರನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ನಾಟಕವನ್ನು ಬಯಲಿಗೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!