ಮನ್ನೇರ ಕಪ್ ಕ್ರಿಕೆಟ್ ಟೂರ್ನಿ: ಬೊಟ್ಟಂಗಡ ತಂಡ ಚಾಂಪಿಯನ್

ಹೊಸದಿಗಂತ ವರದಿ, ಶ್ರೀಮಂಗಲ(ಕೊಡಗು)
ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹರಿಹರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಮನ್ನೇರ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್’ನ ಫೈನಲ್ ಪಂದ್ಯದಲ್ಲಿ ಬಿರುನಾಣಿಯ ತೆರಾಲು ಗ್ರಾಮದ ಬೊಟ್ಟಂಗಡ ತಂಡ ಪ್ರಶಸ್ತಿ ಪಡೆದರೆ, ವೀರಾಜಪೇಟೆ ಹೆಗ್ಗಳ ಗ್ರಾಮದ ಅಚ್ಚಪಂಡ ತಂಡ ರನ್ನರ್ಸ್ ಪ್ರಶಸ್ತಿ ಪಡೆದಿವೆ.
ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಜಯಗಳಿಸಿದ‌ ಬೊಟ್ಟಂಗಡ ತಂಡಕ್ಕೆ ರೂ.30 ಸಾವಿರ ಹಾಗೂ ಅಚ್ಚಪಂಡ ತಂಡಕ್ಕೆ 15 ಸಾವಿರ ರೂ.ನಗದು ಮತ್ತು ಪಾರಿತೋಷಕ ನೀಡಿ‌ ಗೌರವಿಸಲಾಯಿತು.
ಮೂರನೇ‌ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಿರುನಾಣಿ ಗ್ರಾಮದ ಕಳಕಂಡ ತಂಡ ಟ್ರೋಫಿ ಹಾಗೂ ರೂ.5 ಸಾವಿರ ನಗದು ಬಹುಮಾನ ಪಡೆಯಿತು.

ಫೈನಲ್ ನಲ್ಲಿ ತುರುಸಿನ ಪೈಪೋಟಿ:
ಬೊಟ್ಟಂಗಡ ಮತ್ತು ಅಚ್ಚಪಂಡ ತಂಡದ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೊಟ್ಟಂಗಡ ತಂಡ ಮೊದಲ ಓವರ್’ನಲ್ಲಿಯೇ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೂ ತಂಡದ ಪ್ರತು ಅವರ ಬಿರುಸಿನ 70 ರನ್ ಕೊಡುಗೆಯಿಂದ 9 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತು.
ನಂತರ ಬ್ಯಾಟ್ ಮಾಡಿದ ಅಚ್ಚಪಂಡ ತಂಡ 8 ವಿಕೆಟ್ ಕಳೆದುಕೊಂಡು ನಿಗದಿತ 12 ಓವರ್’ಗಳಲ್ಲಿ 58 ರನ್ ಗಳಿಸಿ ಸೋಲು ಅನುಭವಿಸುವ ಮೂಲಕ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಡುವಂತಾಯಿತು. ಅಚ್ಚಪಂಡ ಮಿಥುನ್ 21 ರನ್ ಗಳಿಸಿದರು. ಬೊಟ್ಟಂಗಡ ಪ್ರತು ಪಂದ್ಯ ಪುರುಷ ಗೌರವಕ್ಕೆ ಪಾತ್ರರಾದರು.
ಸೆಮಿಫೈನಲ್ : ಇದಕ್ಕೂ ಮೊದಲು ಬೊಟ್ಟಂಗಡ-ಕಳಕಂಡ ತಂಡಗಳ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ಬೊಟ್ಟಂಗಡ ತಂಡ 4 ವಿಕೆಟ್ ನಷ್ಟಕ್ಕೆ ನಿಗದಿತ 10 ಓವರ್’ಗಳಲ್ಲಿ 80 ರನ್ ಗಳಿಸಿತು.ಬೊಟ್ಟಂಗಡ ಹರೀಶ್ 19, ಪ್ರತು 15 ರನ್ ಗಳಿಸಿದರು.
ನಂತರ ಬ್ಯಾಟ್ ಮಾಡಿದ ಕಳಕಂಡ ತಂಡ 6 ವಿಕೆಟ್ ನಷ್ಟಕ್ಕೆ 61 ರನ್ ಮಾಡಲಷ್ಟೇ ಸಾಧ್ಯವಾಗಿ ಬೊಟ್ಟಂಗಡ ತಂಡ 19 ರನ್’ನಲ್ಲಿ ಗೆಲುವು ಸಾಧಿಸಿ ಫೈನಲ್’ಗೆ ಪ್ರವೇಶ ಪಡೆಯಿತು. ಕಳಕಂಡ ತಂಡದ ಪ್ರಸನ್ನ 43 ರನ್ ಗಳಿಸಿ ತಮ್ಮ ತಂಡಕ್ಕೆ ಕೊಡುಗೆ ನೀಡಿದರು.ಕಳಕಂಡ ಪ್ರಸನ್ನ ಪಂದ್ಯ ಪುರುಷ ಗೌರವಕ್ಕೆ ಪಾತ್ರರಾದರು.
ಎರಡನೇ ಸೆಮಿಫೈನಲ್ ಮಂಡುವಂಡ -ಅಚ್ಚಪಂಡ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಮಂಡುವಂಡ ತಂಡ 9 ವಿಕೆಟ್ ನಷ್ಟಕ್ಕೆ 46 ರನ್ ಗುರಿ ನೀಡಿತು.ಮಂಡುವಂಡ ರಿನ್ಸಿ 10,ಹರ್ಷಿತ್ 9 ರನ್ ಗಳಿಸಿದರು.
ನಂತರ ಬ್ಯಾಟ್ ಮಾಡಿದ ಅಚ್ಚಪಂಡ ತಂಡ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿ 8 ವಿಕೆಟ್ ಅಂತರದ ಗೆಲುವು ಸಾಧಿಸಿ ಫೈನಲ್ ಪ್ರವೇಸಿತು. ಅಚ್ಚಪಂಡ ಮಿಥುನ್ 23 ರನ್ ಗಳಿಸಿದರು.ಮಂಡುವಂಡ ದೀಕ್ಷಿತ್ ಚಂಗಪ್ಪ ಪಂದ್ಯ ಪುರುಷ ಗೌರವ ಪಡೆದರು.
ಮೂರನೇ ಸ್ಥಾನಕ್ಕಾಗಿ ಮಂಡುವಂಡ-ಕಳಕಂಡ ತಂಡದ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಳಕಂಡ ತಂಡ 2 ವಿಕೆಟ್ ನಷ್ಟಕ್ಕೆ 70 ರನ್ ಗುರಿ ನೀಡಿತು. ಕಳಕಂಡ ಹರ್ಷಿತ್ 41, ರಿನ್ಸಿ 14 ರನ್ ಕೊಡುಗೆ ನೀಡಿದರು. ಇದಕ್ಕೆ ಉತ್ತರವಾಗಿ ಮಂಡುವಂಡ 5 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿ ಸೋಲು ಅನುಭವಿಸಿತು. ಮಂಡುವಂಡ ನಿಖಿಲ್ 42,ಬಬುಲಿ 19 ರನ್ ತಮ್ಮ ತಂಡಕ್ಕೆ ಕೊಡುಗೆ ನೀಡಿದರು. ಮಂಡುವಂಡ ಹರ್ಷಿತ್ ಪಂದ್ಯ ಪುರುಷ ಗೌರವ ಪಡೆದರು.
ಪಂದ್ಯಾವಳಿಯಲ್ಲಿ ಬಾಚೀರ ರಾಜ, ಕೊಟ್ಟಂಗಡ ಸೂರಜ್, ಮುಕ್ಕಾಟಿರ ಪ್ರಮಾಂಕ್, ಅಣ್ಣಳಮಾಡ ಭವನ್, ಕೊಟ್ಟಂಗಡ ಅಪ್ಪಣ್ಣ, ಸಿದ್ದಂಡ ಪ್ರಸನ್ನ, ಬೊಟ್ಟಂಗಡ ಗೌತಮ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಕರ್ನಂಡ ಚಲನ್, ಕೊಟ್ಟಂಗಡ ಅಪ್ಪಣ್ಣ ವೀಕ್ಷಕ ವಿವರಣೆ ನೀಡಿದರು.
ಬೆಸ್ಟ್ ಆಫ್ ಸಿರೀಸ್: ಮ್ಯಾನ್ ಆಫ್ ದಿ ಸಿರೀಸ್-ಅಚ್ಚಪಂಡ ಅಯ್ಯಪ್ಪ, ಬೆಸ್ಟ್ ಫೀಲ್ಡರ್-ಅಚ್ಚಪಂಡ ಮಿಥುನ್, ಬೆಸ್ಟ್ ಬೌಲರ್-ಕಳಕಂಡ ಪ್ರಸನ್ನ, ಬೆಸ್ಟ್ ಬ್ಯಾಟ್ಸ್ ಮ್ಯಾನ್-ಅಪ್ಪಾರಂಡ ನೆಲ್ ಅವರ ಆಯ್ಕೆಯಾದರು.
ಮುಂದಿನ ವರ್ಷ ಇದೇ ಮೈದಾನದಲ್ಲಿ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವವನ್ನು ಹರಿಹರ ಗ್ರಾಮದ ಬಾಚೀರ ಕುಟುಂಬಸ್ಥರು ಆಯೋಜಿಸುವುದಾಗಿ ಘೋಷಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!