ವೈದ್ಯಕೀಯ ವಿದ್ಯಾರ್ಥಿಗಳಿಂದ ಗಾಂಜಾ ಮಾರಾಟ ಪ್ರಕರಣ: ಮತ್ತೆ ಇಬ್ಬರು ವೈದ್ಯರ ಬಂಧನ

ಹೊಸದಿಗಂತ ವರದಿ,ಮಂಗಳೂರು:

ಜಿಲ್ಲೆಯನ್ನು ಬೆಚ್ಚಿ ಬೀಳಿಸಿರುವ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳಿಂದ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣದ ತನಿಖೆ ಪೊಲೀಸರಿಂದ ಮುಂದುವರಿದಿದೆ. ಪ್ರಕರಣದ ಬೆನ್ನುಹತ್ತಿರುವ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಆಂಧ್ರ ಪ್ರದೇಶದ ಅನಂತಪುರದ ನಿವಾಸಿ ಹಾಗೂ ಹಾಲಿ ಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಡಾ.ರಾಘವ ದತ್ತಾ (28), ಇನ್ನೋರ್ವ ಆರೋಪಿ ಬೆಂಗಳೂರು ಹಲ್ಸೂರು ಜೋಡುಪಾಲ್ಯದ ನಿವಾಸಿ ಹಾಗೂ ಹಾಲಿ ಮಂಗಳೂರಿನ ಫಳ್ನೀರ್‌ನಲ್ಲಿ ವಾಸವಿರುವ ಡಾ.ಬಾಲಾಜಿ (29) ಎಂದು ಗುರುತಿಸಲಾಗಿದೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿ ೧೩ ಮಂದಿ ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿದೆ. ಇದೀಗ ಮತ್ತೆ ಇಬ್ಬರ ಬಂಧನದೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 15 ಕ್ಕೇರಿದೆ. ಜ.7ರಂದು ಬಂಟ್ಸ್ ಸರ್ಕಲ್ ಬಳಿಯ ಅಪಾರ್ಟ್‌ಮೆಂಟ್‌ಗೆ ದಾಳಿ ನಡೆಸಿದ್ದ ಪೊಲೀಸರು ನಿಷೇಧಿತ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿದ್ದರು.

ಗುರುವಾರದವರೆಗೆ ಬಂಧಿಸಲಾಗಿದ್ದ 13 ಮಂದಿಯನ್ನು ಬಂಧಿಸಿ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಬಂಧಿತರಲ್ಲಿ 10 ಮಂದಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳಾಗಿರುವುದು ತಿಳಿದು ಬಂದಿದ್ದು, ಅವರು ನಗರದ ವಿವಿಧ ಕಾಲೇಜುಗಳಲ್ಲಿ ಶಿಕ್ಷಣ ಹಾಗೂ ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್ಮಾಡುತ್ತಿದ್ದವರಾಗಿದ್ದರು. ಗುರುವಾರ ಬಂಧಿತರಾಗಿರುವ ಮತ್ತಿಬ್ಬರು ಆರೋಪಿಗಳು ಕೂಡಾ ಒಬ್ಬರು ನಗರದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ವೈದ್ಯರು ಹಾಗೂ ಮತ್ತೊಬ್ಬರು ಸ್ನಾತಕೋತ್ತರ ವಿದ್ಯಾರ್ಥಿ.

ವೈದ್ಯನಾಗಿರುವ ಆರೋಪಿ ಮನೆಯಲ್ಲಿ ನಡೆಯುತ್ತಿದ್ದ ಚಿಕ್ಕಮಟ್ಟದ ಕಾರ್ಯಕ್ರಮಕ್ಕೆ ಬರುವ ವಿದ್ಯಾರ್ಥಿಗಳು, ಸ್ನೇಹಿತರಿಗೆ ಅವರಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!