ಕಾಡಾನೆಗಳ ದಾಳಿ: ಅಪಾರ ಪ್ರಮಾಣದ ಬೆಳೆ ನಾಶ, ರೈತರಲ್ಲಿ ಮೂಡಿದ ಆತಂಕ

ಹೊಸದಿಗಂತ ವರದಿ ಶಿವಮೊಗ್ಗ:

ಶಿವಮೊಗ್ಗ ಹಾಗೂ ಹೊಸನಗರ ತಾಲ್ಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿನ ಜಮೀನುಗಳಿಗೆ ಕಳೆದ 15 ದಿನಗಳಿಂದ ದಾಳಿ ಮಾಡುತ್ತಿರುವ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಷ್ಟ ಮಾಡುತ್ತಿದ್ದು, ರೈತರು ತೀವ್ರ ಆತಂಕಕ್ಕೆ ಒಳಗಾಗುವಂತಾಗಿದೆ.

ಶಿವಮೊಗ್ಗ ತಾಲ್ಲೂಕಿನ ಆಯನೂರು ಹೋಬಳಿಯ ಮಲೇಶಂಕರ, ಮಂಜರಿಕೊಪ್ಪ, ಕುಡಿಯ ಹುಬ್ಬನಹಳ್ಳಿ, ಸಂಪಿಗೆಹಳ್ಳ ಮೊದಲಾದ ಕಡೆಗಳಲ್ಲಿ ನಿರಂತರವಾಗಿ ಬೆಳೆ ಹಾನಿ‌ ಮಾಡುತ್ತಿವೆ.

ಮಂಗಳವಾರ ರಾತ್ರಿಯೂ ಕೂಡ ನಾಲ್ಕು ಆನೆಗಳು ಕುಡಿಯಲ್ಲಿನ ಜಮೀನಿಗೆ‌ ನುಗ್ಗಿ ಹಾನಿ ಮಾಡಿವೆ. ಕಾನುಕೇರಿ ಕೃಷ್ಣಪ್ಪ ಎಂಬುವರು ಲೀಸ್ ಗೆ ಜಮೀನು ‌ಪಡೆದು ಮಾಡಿರುವ ಭತ್ತ ಹಾಗೂ‌ ಮೆಕ್ಕೆ ಜೋಳವನ್ನು ಹಾಳು ಮಾಡಿವೆ.

ನಾಲ್ಕೈದು ದಿನಗಳ ಹಿಂದೆ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಗುಬ್ಬಿಗಾ ಗ್ರಾಮದ ಹೊರಬೈಲು, ಗಾಮನಗದ್ದೆ ಯಲ್ಲಿನ ಕೃಷ್ಣಮೂರ್ತಿ ಹಾಗೂ ನಾಗೇಂದ್ರ ಎಂಬುವರ ಭತ್ತ ಹಾಗೂ ಮೆಕ್ಕೆ‌ಜೋಳ ಫಸಲು ಹಾಳು‌ ಮಾಡಿವೆ‌. ಒಂದು ಮರಿ‌ ಸೇರಿದಂತೆ ನಾಲ್ಕು ಆನೆಗಳಿರುವ ಹಿಂಡು ಭದ್ರಾ ಅರಣ್ಯದಿಂದ ಇಲ್ಲಿಗೆ ಬಂದಿದ್ದು, ಇವು ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ.

ಬರಗಾಲದಲ್ಲಿಯೂ ಕೂಡ ಮಲೆನಾಡು ಭಾಗದಲ್ಲಿ ಸ್ವಲ್ಪಮಟ್ಟಿಗೆ ಭತ್ತ ತೆನೆ ಬಂದಿದ್ದು, ಇದೇ ಭತ್ತದ ಗದ್ದೆಗಳನ್ನು‌ ಗುರಿ ಮಾಡಿಕೊಂಡು ದಾಂಧಲೆ ಮಾಡುತ್ತಿವೆ. ನಾಲ್ಕು ಆನೆಗಳು ಸುಮ್ಮನೆ ಗದ್ದೆಯಲ್ಲಿ ನಡೆದು ಹೋದರೂ ಹೆದ್ದಾರಿ ನಿರ್ಮಾಣವಾಗುವುದರಿಂದ ಇಡೀ ಭತ್ತದ ಗದ್ದೆಗಳು ನಾಶವಾಗುತ್ತಿವೆ.

ಕುಡಿಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬುಧವಾರ ಬೆಳಗ್ಗೆ ಸಿರಿಗೆರೆ ಆರ್ ಎಫ್ ಓ ಕಚೇರಿಯ ಬೀಟ್ ಗಾರ್ಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಗ್ರಾಮಸ್ಥರು ಹಾಗೂ ಸಂತ್ರಸ್ತರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!