May 23, 2026
Saturday, May 23, 2026
spot_img

ಬೆಟ್ಟ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಹೊಸದಿಗಂತ ವರದಿ ಬೆಳಗಾವಿ:

ರಾಮದುರ್ಗ ತಾಲೂಕಿನ ಮನಿಹಾಳ-ಸುರೇಬಾನ ಗ್ರಾಮದ ಮಧ್ಯದಲ್ಲಿರುವ ಬೆಟ್ಟ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಒಂದು ಕಿಲೋಮೀಟರ್ ವ್ಯಾಪ್ತಿಗೆ ವ್ಯಾಪಿಸಿದ ಜ್ವಾಲೆ

ಆಧ್ಯಾತ್ಮವಾದಿ ಸದ್ಗುರು ಶಿವಾನಂದ ಸ್ವಾಮಿಜಿ ತಪಸ್ಸು ಮಾಡಿದ ಸ್ಥಳದ ಸಮೀಪದಿಂದಲೇ ಬೆಂಕಿ ಕಾಣಿಸಿಕೊಂಡಿದ್ದು, ಐತಿಹಾಸಿಕ ಪ್ರಸಿದ್ಧ ಶಬರಿ ದೇವಸ್ಥಾನ ಮೇಲ್ಭಾಗದ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯವರೆಗೆ ಬೆಂಕಿ ಆವರಿಸಿಕೊಂಡಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ತಿಳಿದುಬಂದಿದೆ.

ಒಣಗಿದ ಹುಲ್ಲಿಗೆ ಹೊತ್ತಿಕೊಂಡ ಬೆಂಕಿ

ಒಣಗಿದ ಹುಲ್ಲು ಹಾಗೂ ಗಿಡಗಂಟಿಗಳಿಗೆ ಬೆಂಕಿ ವೇಗವಾಗಿ ವ್ಯಾಪಿಸಿಕೊಂಡ ಪರಿಣಾಮ ಬೆಟ್ಟ ಪ್ರದೇಶದಲ್ಲಿ ಹೊಗೆ ಆವರಿಸಿಕೊಂಡು ದೂರದಿಂದಲೇ ಕಾಣಿಸುತ್ತಿತ್ತು. ಕೆಲ ಹಾದಿಹೋಕರು ಅಥವಾ ಅಜಾಗರೂಕತೆಯಿಂದ ಯಾರಾದರೂ ಬೆಂಕಿ ಹಚ್ಚಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಅಗ್ನಿಶಾಮಕ ದಳದ ಹರಸಾಹಸ

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಗಾಳಿ ಹೆಚ್ಚಿದ್ದರಿಂದ ಬೆಂಕಿ ನಿಯಂತ್ರಣಕ್ಕೆ ತರುವುದು ಅಧಿಕಾರಿಗಳಿಗೆ ಸವಾಲಾಗಿತ್ತು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನ ಮುಂದುವರಿದಿದೆ.

ಅರಣ್ಯ ಮತ್ತು ಧಾರ್ಮಿಕ ಸ್ಥಳ ರಕ್ಷಣೆಗೆ ಒತ್ತಾಯ

ಈ ಘಟನೆ ಹಿನ್ನೆಲೆಯಲ್ಲಿ ಅರಣ್ಯ ಸಂಪತ್ತು ಹಾಗೂ ಧಾರ್ಮಿಕ ಸ್ಥಳಗಳ ರಕ್ಷಣೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !