ʼಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಾಸ್ತಿ’

ಹೊಸದಿಗಂತ ವರದಿ, ಮೈಸೂರು:
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡ ಸಾಹಿತ್ಯದ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಸರಳ, ಸಜ್ಜನ ವ್ಯಕ್ತಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ ಎನ್ ನಂದೀಶ್ ಹಂಚೆ ತಿಳಿಸಿದರು. ಸೋಮವಾರ ಅಪೂರ್ವ ಸ್ನೇಹ ಬಳಗ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಮೈಸೂರಿನ ಆದಿಚುಂಚನಗಿರಿ ರಸ್ತೆಯಲ್ಲಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ವೃತ್ತದಲ್ಲಿ
ಹಮ್ಮಿಕೊಂಡಿದ್ದ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜಯಂತಿಯ ಅಂಗವಾಗಿ ಮಾಸ್ತಿ -ನೆನಪಿನಂಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಣ್ಣ ಕಥೆಗಳ ಜನಕನೆಂದು ಖ್ಯಾತವಾಗಿರುವ ಅವರು ಕನ್ನಡದ ಆಸ್ತಿ ಎಂದರು.
ದಕ್ಷಿಣ ಭಾರತದ ಐದಾರು ಭಾಷೆಯ ಸಾಹಿತ್ಯಗಳ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡಕ್ಕೆ ಕೀರ್ತಿ ತಂದವರು. ತಮ್ಮ ಚಿಕ್ಕವೀರ ರಾಜೇಂದ್ರ ಕೃತಿಗೆ ನಾಲ್ಕನೇ ಜ್ಞಾನಪೀಠ ಪ್ರಶಸ್ತಿ ತಂದುಕೊಡುವುದರ ಮೂಲಕ ಕನ್ನಡಕ್ಕೆ ಸ್ಥಾನಮಾನ ತಂದುಕೊಟ್ಟವರು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಸಾಹಿತ್ಯ ಪ್ರಕಾರದ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಇವರು ಮೈಸೂರು ಮಹಾರಾಜರಿಂದ ರಾಜಸೇವಾ ಪ್ರಸಕ್ತ ಎಂಬ ಬಿರುದನ್ನು ಗಳಿಸಿದ್ದರು. ಕನ್ನಡ ಸಾಹಿತ್ಯದ ಸವ್ಯಸಾಚಿಯಂತೆ ಕೆಲಸ ಮಾಡಿದವರು. ಇವರು ತಮ್ಮ ಹದಿನೆಂಟನೆ ವಯಸ್ಸಿಗೆ ರಂಗನ ಮದುವೆ ಎಂಬ ಕಥೆಯನ್ನು ಬರೆದವರು. ಆಗಿನ ಮೈಸೂರು ಪ್ರಾಂತ್ಯದಲ್ಲಿ ಐ.ಸಿ.ಎಸ್. ಪರೀಕ್ಷೆಯನ್ನು ಪಾಸು ಮಾಡಿ ಜಿಲ್ಲಾಧಿಕಾರಿಯಾಗಿದ್ದರು ಎಂದರು.
ನಗರ ಪಾಲಿಕಾ ಸದಸ್ಯ ಎಂ ಸಿ ರಮೇಶ್ ಮಾತನಾಡಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸಾಹಿತ್ಯ ನಮ್ಮ ನಿಜವಾದ ಆಸ್ತಿ, ಮಾಸ್ತಿ ಕನ್ನಡದ ಆಸ್ತಿ ಎಂಬ ಮಾತು ನಿಜವಾಗಬೇಕಾದರೆ ಪ್ರತಿಯೊಬ್ಬ ಪ್ರಜೆ, ಸಾಹಿತಿಗಳು ಮಾಸ್ತಿಯವರ ಸಾಹಿತ್ಯವನ್ನು ಓದಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಗದೀಶ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ,ರಮೇಶ್ ಗೌಡ, ಬಿಜೆಪಿಯ ಚಾಮುಂಡೇಶ್ವರಿ ಕ್ಷೇತ್ರದ ಉಪಾಧ್ಯಕ್ಷ ರಾಕೇಶ್ ಭಟ್ ,ಸುಚೀಂದ್ರ ,ಚಂದ್ರು ,ವೆಂಕಟೇಶ್ ದಾಸ ,ಗೋಪಾಲ್ ಇನ್ನಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!