ಕಲಿಕೆ ಸರಳಗೊಳಿಸಿದ ಗಣಿತ ಪ್ರಯೋಗಾಲಯ

-ನಿತೀಶ ಡಂಬಳ

ಗಣಿತ ಬಹುತೇಕರಿಗೆ ಕಷ್ಟದ ವಿಷಯವೆಂಬ ಭಾವನೆ. ಬೋಧನಾ ವೈಫಲ್ಯ ಅಥವಾ ಕಲಿಕೆಯಲ್ಲಿ ನಿರಾಸಕ್ತಿಯ ಕಾರಣ ವಿದ್ಯಾರ್ಥಿಗಳು ಗಣಿತವನ್ನು ದೂರವಿಡುತ್ತಾರೆ. ಈ ಸಮಸ್ಯೆಗೆ ಗಣಿತ ಪ್ರಯೋಗಾಲಯ ಉತ್ತಮ‌ ಪರಿಹಾರ ಮಾರ್ಗವಾಗಿದೆ.

ಸಾಮಾನ್ಯವಾಗಿ ವಿಜ್ಞಾನ ವಿಷಯಗಳಿಗೆ ಪ್ರಯೋಗಾಲಯ ಇರುವುದನ್ನು ನೋಡಿದ್ದೇವೆ. ಆದರೆ ಗಣಿತಕ್ಕೂ ಇರುವುದು ವಿಶೇಷ. ಧಾರವಾಡ ಹಾಗೂ ಗದಗ ಜಿಲ್ಲೆಗಳ ಕೆಲ ಶಾಲೆಗಳಲ್ಲಿ ಗಣಿತ ಪ್ರಯೋಗಾಲಯ ಸ್ಥಾಪಿತವಾಗಿದೆ.‌

ಏನಿದು ಗಣಿತ ಪ್ರಯೋಗಾಲಯ?

ಕೊರೋನಾ ಕಾಲದಲ್ಲಿ ವರ್ಚುಯಲ್ ಮೂಲಕ ವಿದ್ಯಾರ್ಥಿಗಳು ವಿಷಯಗಳನ್ನು ‌ನೋಡಿ ಕಲಿತರು. ಆದರೆ ಅವುಗಳನ್ನು ಸ್ಪರ್ಶದ‌ ಮೂಲಕ ಕಲಿತರೆ ಇನ್ನೂ ಹೆಚ್ಚು ಮನದಟ್ಟಾಗುತ್ತದೆ ಎಂಬ ಅಂಶ ಮನಗಂಡು ಧಾರವಾಡದ ಗಣಿತ ಉಪನ್ಯಾಸಕ ಡಾ. ವೀರಣ್ಣ ಬೊಳಿಶೆಟ್ಟಿ ಹಾಗೂ ರವಿಪ್ರಸಾದ ಕುಲಕರ್ಣಿ ಅವರು ಗಣಿತದ ಮಾದರಿಗಳನ್ನು ತಯಾರಿಸಿದ್ದಾರೆ. ಕಡಿಮೆ ಖರ್ಚಿನಲ್ಲಿ ನಿತ್ಯ ಉಪಯೋಗಿ ವಸ್ತುಗಳನ್ನೇ ಮಾದರಿಗಳನ್ನಾಗಿ ಪರಿವರ್ತಿಸಿದ್ದಾರೆ.

ಗಣಿತದ ಪ್ರಾಥಮಿಕ ಸಂಗತಿಗಳಾದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ, ಭಿನ್ನರಾಶಿ, ವರ್ಗಮೂಲ, ಮಗ್ಗಿಗಳು, ಪೈ, ಸಂಖ್ಯೆಗಳು, ರೇಖಾಗಣಿತದಲ್ಲಿನ ಕೋನಗಳು, ಚತುರ್ಭುಜ, ಸ್ಪರ್ಶಕ ಮುಂತಾದ ವಿಷಯಗಳನ್ನು ಸಿದ್ಧ ಮಾದರಿಗಳ ಮೂಲಕ ಬೋಧಿಸುವಂತೆ ಮಾಡಿದ್ದಾರೆ.

ಇವುಗಳಿಂದ ವಿದ್ಯಾರ್ಥಿಗಳು ಸ್ವತಃ ಮಾದರಿಗಳನ್ನು ಮುಟ್ಟಿ, ತಾವೇ ಪ್ರಯೋಗ ಮಾಡಿ ಕಲಿಯುತ್ತಿದ್ದಾರೆ. ಕಲಿಕೆಯಲ್ಲಿ ಆಸಕ್ತಿ ಹೆಚ್ಚುವುದರ ಜೊತೆಗೆ ಗಣಿತ ಮಾದರಿಗಳ ಮೂಲಕ ಸರಳ ವಿಷಯವಾಗಿದೆ. ಮಾದರಿಗಳ ಜೊತೆಗೆ ಗಣಿತ ವಿಷಯ ತಜ್ಞರ ಮಾಹಿತಿಗಳು, ಪ್ರಾಚೀನ ಕಾಲದಲ್ಲಿನ ಗಣಿತದ ಉಪಯೋಗ, ಆಸಕ್ತಿದಾಯಕ‌ ಮಾಹಿತಿಗಳು, ದೇಶದಲ್ಲಿರುವ ಗಣಿತ ಸಂಶೋಧನಾ ಕೇಂದ್ರಗಳು ಮುಂತಾದ ಮಾಹಿತಿ ಫಲಕಗಳನ್ನು ಪ್ರಯೋಗಾಲಯದಲ್ಲಿ ಕಾಣಬಹುದು.

ಸದ್ಯ ಧಾರವಾಡ, ಹುಬ್ಬಳ್ಳಿ, ಗದಗ, ಹೊಸಳ್ಳಿ, ಹುಲಕೋಟಿ ಮುಂತಾದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸೇರಿದಂತೆ 18 ಕಡೆ ಗಣಿತ ಪ್ರಯೋಗಾಲಯ ಕಾರ್ಯ ನಿರ್ವಹಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!