ಮೇಕೆದಾಟು ಪಾದಯಾತ್ರೆ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ: ಸಚಿವ ಕಾರಜೋಳ

ಹೊಸದಿಗಂತ ವರದಿ,ಬಾಗಲಕೋಟೆ:

ಮೇಕೆದಾಟು ಯೋಜನೆ ನೆಪದೊಂದಿಗೆ ಪಾದಯಾತ್ರೆ ಶುರು ಮಾಡಿರುವ ಕಾಂಗ್ರೆಸ್ ನಾಯಕರು ರಾಜ್ಯದ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಬಿಡಬೇಕು. ಕೈ ನಾಯಕರು ಕೈಗೊಂಡಿರುವ ಮೇಕದಾಟು ಹೋರಾಟ ಅಪ್ರಾಮಾಣಿಕ ಹೋರಾಟವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕರ ಧೋರಣೆ ವಿರುದ್ಧ ಹರಿಹಾಯ್ದರು.

ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಸುಳ್ಳು ಆರೋಪ ಮಾಡಿಯೇ ದೇಶದಲ್ಲಿ 60 ವರ್ಷ ಆಡಳಿತ ನಡೆಸಿ ಈಗ ಸ್ಕ್ರ್ಯಾಪ್( ಮೋಡಕಾ) ಆಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ದುರಂತ ಕಾದಿದೆ ಎಂದು ಛೇಡಿಸಿದರು.

ಹರಿಕಥೆ ಹೇಳುವುದನ್ನು ಪಾಟೀಲ ಬಿಡಲಿ : ಮೇಕೆದಾಟು ಯೋಜನೆ ಕುರಿತು ನಾರಿಮನ್ ಭೇಟಿಯಾದೆ, ಅವರನ್ನು ಭೇಟಿಯಾದೆ ಇವರನ್ನು ಭೇಟಿಯಾದೆ ಎಂದು ರಾಜ್ಯದ ಜನರಿಗೆ ಹರಿಕಥೆ ಭಟ್ಟರ ಪುರಾಣ ಹೇಳುವುದನ್ನು ಎಂ.ಬಿ.ಪಾಟೀಲರು ಬಿಡಬೇಕು. ರಾಜ್ಯದ ಜನರ ಪಾಲಿಗೆ ದ್ರೋಹ ಎಸಗುವ ಕೆಲಸವನ್ನು ಮಾಡುತ್ತೀದ್ದೀರಿ. ನಾನು ಕೇಳಿದ ಪ್ರಶ್ನಗೆ ಉತ್ತರವನ್ನು ಕೊಡಲು ಆಗದೇ ಎಂ.ಬಿ.ಪಾಟೀಲರು ಹರಿಕಥೆ ಹೇಳುತ್ತಾ ಹೋಗುತ್ತಿದ್ದಾರೆ ಎಂದು ಪಾಟೀಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆ ಕುರಿತು ಯಾವುದೇ ಪೂರ್ವ ಸಿದ್ಧತಾ ವರದಿಯನ್ನು ತಯಾರಿಸಿಕೊಳ್ಳದೇ ಒಂದು ರೀರಿ ಜ್ಞಾನವಿಲ್ಲದ ರೀತಿ ಯೋಜನೆ ಬಗ್ಗೆ ತಾತ್ಸಾರ ಮನೋಭಾವನೆಯನ್ನು ತಾಳಿ ಜನರಿಗೆ ಮೋಸ ಮಾಡಿದ್ದಾರೆ ಎಂದರು.

2012 ರಿಂದ 2014ರವರೆಗೆ ತಮ್ಮದೇ ಕಾಂಗ್ರೆಸ್ ಪಕ್ಷದ ಸರ್ಕಾರದ ರದ ಅವಧಿಯಲ್ಲಿ ಮೇಕೆದಾಟು ಯೋಜನೆ ಕುರಿತು ಅಂದಿನ ಜಲಸಂಪನ್ಮೂಲ ಸಚಿವರು ಅನುಮೋದನೆಗೆ ಕಳುಹಿಸಿದಾಗ ಯಾಕೆ ಈಯೋಜನೆ ಕುರಿತು ತಾತ್ಸಾರ ಮನೋಭಾವನೆ ತಾಳಿದಿರಿ ಎಂದು ಕೈ ನಾಯಕರನ್ನು ಪ್ರಶ್ನಿಸಿದರು.

ಕ್ಷಮೆ ಕೇಳಲಿ : ಕಾನೂನು ಉಲ್ಲಂಘಿಸಿ , ಕೋವಿಡ್ ನಿಮಯ ಮೀರಿ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಈಗಾಗಲೇ ಪಾದಯಾತ್ರೆಯಲ್ಲಿ ಭಾಗಿಯಾದ ಕೆಲವರಿಗೆ ಕೋವಿಡ್ ದೃಢವಾಗಿದೆ. ಪಾದಯಾತ್ರೆ ಕುರಿತು ಕಾಂಗ್ರೆಸ್ ನಾಯಕರು ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಆಣೆ ಮಾಡಿ ಅಧಿಕಾರ ಪಡೆದಿದ್ದಕ್ಕೆ ಕ್ಷಮೆ ಕೇಳಿ : ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿ ಸಂಗಮನಾಥನ ಬಳಿ ಬಂದು ಕಾಯಿ ಕಟ್ಟಿ ಈ ಭಾಗದ ಜನರಿಗೆ ಮೋಸ ಮಾಡಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷದವರು ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಅಪ್ರಾಮಾಣಿಕ ಹೋರಾಟ : ಕೃಷ್ಣೆಯ ಹೆಸರಿನಲ್ಲಿ ಅಧಿಕಾರ ಉಂಡ ಕಾಂಗ್ರೆಸ್ ನಾಯಕರು ಐದು ವರ್ಷದಲ್ಲಿ 130 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲಿಲ್ಲ. ಕೃಷ್ಣೆಗೆ ಪ್ರತಿವರ್ಷ 10 ಸಾವಿರ ಕೋಟಿ ಅನುದಾನ ನೀಡುತ್ತೇವೆ ಎಂದು ಹೇಳಿದವರು ಈಗ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ಅಪ್ರಾಮಾಣಿಕ ಹೋರಾಟವಾಗಿದೆ ಎಂದು ಕಾಂಗ್ರೆಸ್ ನಾಯಕರನ್ನು ಕಟುಕಿದರು.

ಶಾಸಕ ವೀರಣ್ಣ ಚರಂತಿಮಠ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!