Friday, October 7, 2022

Latest Posts

ಆ ವ್ಯವಸ್ಥೆ ಇದ್ದಿದ್ರೆ ನನ್ನ ಪತಿ ಸಾಯುತ್ತಿರಲಿಲ್ಲ: ನಟಿ ಮೀನಾ ಭಾವನಾತ್ಮಕ ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಮೀನಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಎಲ್ಲ ಸ್ಟಾರ್ ಹೀರೋಗಳೊಂದಿಗೆ ನಾಯಕಿಯಾಗಿ ನಟಿಸಿದ್ದರು. 2009ರಲ್ಲಿ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿ ನಡೆಸುತ್ತಿರುವ ವಿದ್ಯಾಸಾಗರ್ ಅವರನ್ನು ಮೀನಾ ವಿವಾಹವಾದರು. ಮದುವೆಯಾಗಿ ಮಗುವಾದ ನಂತರ ಕೆಲ ವರ್ಷಗಳ ಕಾಲ ಸಿನಿಮಾದಿಂದ ವಿರಾಮ ತೆಗೆದುಕೊಂಡರೂ ಮತ್ತೆ ಸಿನಿ ರಂಗದಲ್ಲಿ ಬ್ಯುಸಿಯಾಗಿದ್ದ ಮೀನಾಗೆ ಪತಿ ಅಗಲಿಕೆಯಿಂದ ಅತೀವ ದುಃಖ ತಂದಿದೆ.

ಈ ವರ್ಷದ ಜೂನ್‌ನಲ್ಲಿ ಮೀನಾ ಕುಟುಂಬ ಕೊರೊನಾ ಸೋಂಕಿಗೆ ಒಳಗಾಗಿತ್ತು. ಕರೋನಾದಿಂದ ಚೇತರಿಸಿಕೊಂಡ ನಂತರ, ಮೀನಾ ಅವರ ಪತಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಶ್ವಾಸಕೋಶದಲ್ಲಿ ಕೆಲ ಸಮಸ್ಯೆ ಕಾಣಿಸಿಕೊಂಡು ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟ ವಿಷಯ ತಿಳಿದೇ ಇದೆ. ಇದರಿಂದ ದುಃಖದ ಮಡುವಿನಲ್ಲಿ ನಟಿ ಮೀನಾ ಒಂದು ಉತ್ತಮ ನಿರ್ಧಾರವನ್ನು ಕೈಗೊಂಡಿದ್ದಾರೆ. ತನ್ನ ಅಂಗಾಂಗಗಳನ್ನು ದಾನ ಮಾಡುವುದಾಗಿ ಮೀನಾ ಘೋಷಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, “ಜೀವ ಉಳಿಸುವುದಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ. ಜೀವ ಉಳಿಸಲು ಅಂಗಾಂಗ ದಾನ ಉತ್ತಮ ಮಾರ್ಗವಾಗಿದೆ. ಅಂಗಾಂಗ ದಾನವು ರೋಗಗಳೊಂದಿಗೆ ಹೋರಾಡುತ್ತಿರುವ ಅನೇಕ ಜನರ ಪಾಲಿಗೆ ಪುನರ್ಜನ್ಮವಿದ್ದಂತೆ. ದಾನಿಗಳು ಇದ್ದಿದ್ದರೆ ನನ್ನ ಸಾಗರ್ ಬದುಕಿರುತ್ತಿದ್ದ, ನನ್ನ ಬದುಕಿನ ದೆಸೆಯೇ ಬದಲಾಗುತ್ತಿತ್ತು. ಒಬ್ಬ ದಾನಿ ಎಂಟು ಜೀವಗಳನ್ನು ಉಳಿಸಬಹುದು. ಅಂಗಾಂಗ ದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ರೀತಿ ಅಂಗಾಂಗಗಳನ್ನು ದಾನ ಮಾಡುವುದರಿಂದ ಮನುಷ್ಯ ಬದುಕುವುದಷ್ಟೇ ಅಲ್ಲ, ಅವರ ಸಂಸಾರಕ್ಕೂ ನೆಮ್ಮದಿ ಸಿಗುತ್ತದೆ. ವಿಶ್ವ ಅಂಗದಾನ ದಿನದಂದು ನನ್ನ ಅಂಗಾಂಗಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದು ಮೀನಾ ಭಾವನಾತ್ಮಕ ಪೋಸ್ಟ್‌ ಮಾಡಿದ್ದಾರೆ. ಮೀನಾ ಅವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!