ಮರಿವುಪೋಲ್’ಗಾಗಿ ಮಹಾ ಕದನ, ರಷ್ಯ ಆಕ್ರಮಣದಿಂದ ಇದನ್ನುಳಿಸಿಕೊಳ್ಳೋದು ಉಕ್ರೇನ್’ಗೇಕೆ ನಿರ್ಣಾಯಕ ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮರಿವುಪೋಲ್ ಬಂದರು ನಗರಿಯನ್ನು ಸುತ್ತುವರಿದಿರುವ ರಷ್ಯ ಅಲ್ಲಿನ ಪಡೆಗಳಿಗೆ ಶರಣಾಗುವಂತೆ ಹೇಳಿದಾಗ, ಪ್ರತಿಯಾಗಿ ಉಕ್ರೇನ್ ಆ ನಗರವನ್ನು ರಷ್ಯಕ್ಕೆ ಒಪ್ಪಿಸುವುದು ಸಾಧ್ಯವೇ ಇಲ್ಲ, ಎಷ್ಟೇ ರಕ್ತ ತೆತ್ತಾದರೂ ಅದನ್ನುಳಿಸಿಕೊಳ್ಳುವುದಕ್ಕೆ ಸಿದ್ಧ ಎಂಬಂತೆ ಮಾತನಾಡಿದೆ.

ಸುಮಾರು 30,000 ಮಂದಿ ಅಲ್ಲಿ ಮಹಾಸಂಘರ್ಷದಲ್ಲಿ ಸಿಲುಕಿಕೊಂಡಿರುವ ವರದಿ ಇದೆ. ಆಹಾರ, ವಿದ್ಯುತ್ ಎಲ್ಲವೂ ಅಸ್ತವ್ಯಸ್ತ. ಅಷ್ಟಾಗಿಯೂ ಉಕ್ರೇನ್ ಈ ನಗರವನ್ನು ಕೊನೆ ಉಸಿರಿರುವತನಕ ಕಾಪಿಡುತ್ತೇನೆಂಬಂತೆ ಪ್ರಯತ್ನಿಸುತ್ತಿರುವುದೇಕೆ?

ಏಕೆಂದರೆ ಮರಿವುಪೋಲ್ ಬಂದರು ನಗರ ರಷ್ಯದ ವಶವಾಯಿತೆಂದರೆ ಕಾರ್ಯತಂತ್ರದ ದೃಷ್ಟಿಯಿಂದ ಉಕ್ರೇನ್ ತಿನ್ನುವ ಬಹುದೊಡ್ಡ ಹೊಡೆತ ಅದಾಗುತ್ತದೆ, ಅಲ್ಲದೇ ರಷ್ಯಕ್ಕೆ ಭಾರಿ ಮೇಲುಗೈ ಆಗುತ್ತದೆ. ಏಕೆಂದರೆ ಅಜೋವ್ ಸಮುದ್ರಕ್ಕೆ ಬರುವುದಕ್ಕೆ ಉಕ್ರೇನಿಗಿರುವ ಹೆಬ್ಬಾಗಿಲೇ ಮರಿವುಪೋಲ್.

ಆರ್ಥಿಕ ಶಕ್ತಿ

ಕಲ್ಲಿದ್ದಲು, ಸ್ಟೀಲ್, ಯಂತ್ರಗಳು, ಗೋದಿ ಇವೆಲ್ಲವೂ ಮರಿವುಪೋಲ್ ಬಂದರಿನ ಮೂಲಕ ಅಜೋವ್ ಸಮುದ್ರವನ್ನು ಸೇರಿಕೊಂಡು, ಅಲ್ಲಿಂದ ಮುಂದೆ ಕಪ್ಪು ಸಮುದ್ರಕ್ಕೆ ಹೋಗಿ ಜಗತ್ತಿನ ಇತರ ಭಾಗಗಳತ್ತ ಮುಖ ಮಾಡುತ್ತವೆ. ಹೀಗಿರುವಾಗ ಮರಿವುಪೋಲ್ ಬಂದರನ್ನು ಕಳೆದುಕೊಳ್ಳುವುದೆಂದರೆ ಉಕ್ರೇನ್ ಆರ್ಥಿಕ ಶಕ್ತಿಯ ಮೇಲೆ ಮಹಾಪ್ರಹಾರ ಮಾಡಿದಂತೆ. ಯುರೋಪಿಗೆ ದೊಡ್ಡಮಟ್ಟದಲ್ಲಿ ಸ್ಟೀಲ್ ಒದಗಿಸುವ, ಉಕ್ರೇನ್ ನ ಸ್ಟೀಲ್ ಉತ್ಪಾದನೆಯ ಅರ್ಧದಷ್ಟನ್ನು ಉತ್ಪಾದಿಸುವ ಕಾರ್ಖಾನೆ ಇರುವುದೂ ಇಲ್ಲೇ.

ಕ್ರಿಮಿಯಾ ಮತ್ತು ಬಂಡುಕೋರ ಪ್ರದೇಶಗಳ ನಡುವಿನ ಬಫರ್ ಜೋನ್

ನೀವು ಭೂಪಟದಲ್ಲಿ ಮರಿವುಪೋಲ್ ಸ್ಥಾನವನ್ನು ಗಮನಿಸಿದರೆ, ಅದರ ಒಂದು ತುದಿಯಲ್ಲಿ ರಷ್ಯವು 2014ರಲ್ಲಿ ವಶಪಡಿಸಿಕೊಂಡ ಕ್ರಿಮಿಯಾ ಪ್ರದೇಶವಿದೆ. ಇನ್ನೊಂದರಲ್ಲಿ ರಷ್ಯ ಬೆಂಬಲಿತ ಬಂಡುಕೋರರ ಪ್ರಾಬಲ್ಯವಿರುವ ಡಾನ್ಬಾಸ್ ಪ್ರದೇಶದ ಎರಡು ಪ್ರಾಂತ್ಯಗಳಿವೆ. ಇವೆರಡನ್ನು ಸ್ವತಂತ್ರರೆಂದು ಗುರುತಿಸುವುದರೊಂದಿಗೆ ರಷ್ಯವು ಉಕ್ರೇನ್ ವಿರುದ್ಧ ಯುದ್ಧಕ್ಕೆ ನಾಂದಿ ಹಾಡಿತ್ತೆಂಬುದು ಇಲ್ಲಿ ಗಮನಾರ್ಹ.

ಮರಿವುಪೋಲ್ ಪತನವಾಗುವುದೆಂದರೆ ರಷ್ಯವು ಕ್ರಿಮಿಯಾ ಮತ್ತು ಬಂಡುಕೋರ ಪ್ರದೇಶಗಳೆರಡರ ಮಧ್ಯೆ ಸೇತುವೆಯೊಂದನ್ನು ಕಂಡುಕೊಂಡಂತೆ.

ಈ ಎಲ್ಲ ಕಾರಣಗಳಿಂದ ಮರಿವುಪೋಲ್ ಈಗ ರಕ್ತಸಿಕ್ತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!