ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಪರಿಶೀಲಿಸಿದ ಸಚಿವ ಅಶ್ವತ್ಥನಾರಾಯಣ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕೋವಿಡ್ -19 ಮತ್ತು ಒಮಿಕ್ರಾನ್ ಸೋಂಕು  ಹೆಚ್ಚಳದಿಂದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಉಂಟಾಗಲಿರುವ ಪರಿಸ್ಥಿತಿಯನ್ನು ಎದುರಿಸಲು ಇರುವ ವ್ಯವಸ್ಥೆ ಮತ್ತು ಮಾಡಿಕೊಳ್ಳಬೇಕಾದ ಸಿದ್ಧತೆಗಳನ್ನು ಕುರಿತು ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶನಿವಾರ ಪರಾಮರ್ಶನಾ ಸಭೆ ನಡೆಸಿದರು.

ನಂತರ ಕೆ.ಸಿ.ಜನರಲ್ ಆಸ್ಪತ್ರೆಗೆ ಕೂಡ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ಈ ಆಸ್ಪತ್ರೆಯಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ತೀವ್ರ ಕೊರತೆ ಇದ್ದು, ಈ ಸಂಬಂಧ ತ್ವರಿತವಾಗಿ ಪ್ರಸ್ತಾವನೆ ಸಲ್ಲಿಸಬೇಕು. ಇದಕ್ಕೆ ತಾವು ಕ್ಷಿಪ್ರವಾಗಿ ಅನುಮೋದನೆ ಕೊಡಿಸುವುದಾಗಿ ಹೇಳಿದರು.

ಕ್ಷೇತ್ರದಲ್ಲಿ ಕೂಡಲೇ ಡ್ರೈವ್-ಇನ್- ಸ್ವಾಬ್ ಸಂಗ್ರಹಣಾ ವ್ಯವಸ್ಥೆ ಜಾರಿಗೆ ತರಲಾಗುವುದು. ಜೊತೆಗೆ, ಮನೆಮನೆಗೂ ತೆರಳಿ ತಪಾಸಣೆ ನಡೆಸಲಾಗುವುದು. ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನಾ ಮತ್ತು ಒಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡಲು 24X7 ಕಾರ್ಯ ನಿರ್ವಹಿಸುವಂತೆ ಮಾಡುವ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗುರುತಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕೊರೋನಾ ಎರಡನೇ ಅಲೆ ತೀವ್ರವಾಗಿದ್ದಾಗ ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಸಹಾಯವಾಣಿ ಮತ್ತು ವಾರ್ ರೂಮ್ ಸ್ಥಾಪಿಸಲಾಗಿತ್ತು. ಈಗ ಪುನಃ ಇವು ಕಾರ್ಯಾರಂಭ ಮಾಡಲಿವೆ. ಜೊತೆಗೆ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಹೇಳಿದರು.

ಸೋಂಕು ಕಂಡುಬಂದವರಿಗೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಅಗತ್ಯವಾಗಿದೆ. ಇದಕ್ಕಾಗಿ, ಲೈಫ್ ಸೈನ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಸಂಸ್ಥೆಯೊಂದಿಗೆ ವಿಳಂಬ ಮಾಡದೆ ಒಡಂಬಡಿಕೆ ಮಾಡಿಕೊಳ್ಳಬೇಕು. ಹಾಗೆಯೇ, ಆಸ್ಪತ್ರೆಗೆ ದಾಖಲಾಗುವವರಿಗೆ ಪೌಷ್ಟಿಕ ಆಹಾರ ಪೂರೈಸಲು ಹಿಂದಿನ ಸಲದಂತೆ ಈ ಸಲವೂ ಇಸ್ಕಾನ್ ಸಂಸ್ಥೆಯೊಂದಿಗೆ ಸೂಕ್ತ ವ್ಯವಸ್ಥೆ ಆಗಬೇಕು ಎಂದು ಅವರು ಕಟ್ಟುನಿಟ್ಟಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಅವರು, ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ 50 ಹಾಸಿಗೆಗಳ ಸಾಮರ್ಥ್ಯದ ಮಕ್ಕಳ ಚಿಕಿತ್ಸಾ ಕಟ್ಟಡ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ 60 ಹಾಸಿಗೆಗಳ ಸಾಮರ್ಥ್ಯದ ಕಟ್ಟಡಗಳ ಕಾಮಗಾರಿಯನ್ನೂ ಪರಿಶೀಲಿಸಿ, ತ್ವರಿತವಾಗಿ ಮುಗಿಸುವಂತೆ ಸೂಚಿಸಿದರು.

ಜತೆಯಲ್ಲಿ ಬಿಬಿಎಂಪಿ ಪಶ್ಚಿಮ ವಲಯದ ಕೋವಿಡ್ ಮೇಲ್ವಿಚಾರಣಾ ಮುಖ್ಯಸ್ಥ ಉಜ್ವಲ್ ಘೋಷ್, ಪಶ್ಚಿಮ ವಲಯದ ಆಯುಕ್ತ ದೀಪಕ್, ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವೆಂಕಟೇಶಯ್ಯ ಮುಂತಾದವರಿದ್ದರು.

ಆಕ್ಸಿಜನ್, ಐಸಿಯು, ವೆಂಟಿಲೇಟರ್ ಸೌಲಭ್ಯ ಸಜ್ಜು

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 106 ಹಾಸಿಗೆಗಳ ಸಾಮರ್ಥ್ಯದ ವೆಂಟಿಲೇಟರ್ ಸಹಿತ ವಾರ್ಡ್, 11 ಹಾಸಿಗೆಗಳಿರುವ ಎಚ್ಎಫ್ಎನ್ಸಿ ಆಕ್ಸಿಜನ್ ವ್ಯವಸ್ಥೆ ಸಹಿತ ವಾರ್ಡ್, 60 ಹಾಸಿಗೆಗಳ ಎಚ್ಇ ಮಾನಿಟರ್ ಸಹಿತ ಸ್ಟೆಪ್-ಡೌನ್ ಐಸಿಯು ವಾರ್ಡ್ ಸಜ್ಜಾಗಿವೆ. ಇದರ ಜೊತೆಗೆ, ಪ್ಯಾಲೇಸ್ ಗುಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ 30 ಹಾಸಿಗೆಗಳ ಸ್ಟೆಪ್-ಡೌನ್ ಐಸಿಯು ವಾರ್ಡ್, ಮಕ್ಕಳ ಚಿಕಿತ್ಸೆಗೆಂದು 15 ಸಿ-ಟ್ಯಾಪ್ ಮೆಶೀನ್ ಸಹಿತ ವಾರ್ಡ್ ಮತ್ತು ಹೈಟೆಕ್ ಪ್ರಯೋಗಾಲಯ ಇದೆ ಎಂದು ವಿವರಿಸಿದರು.

ಉಳಿದಂತೆ, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 3,000 ಪಲ್ಸ್ ಆಕ್ಸಿಮೀಟರ್ ಬ್ಯಾಂಕ್, 200 ಕಾಂಟ್ಯಾಕ್ಟ್ ಲೆಸ್ ಮಾನಿಟರುಗಳು, 100 ಆಕ್ಸಿಜನ್ ಕಾನ್ಸಂಟ್ರೇಟರುಗಳು ಮತ್ತು 200 ಹೋಮ್ ಐಸೋಲೇಷನ್ ಆಕ್ಸಿಜನ್ ಕಾನ್ಸಂಟ್ರೇಟರುಗಳು ಇವೆ. ಸೋಂಕು ಕಂಡುಬಂದು, ಮನೆಯಲ್ಲೇ ಪ್ರತ್ಯೇಕ ವಾಸವಿರುವವರಿಗೆ ಆಮ್ಲಜನಕ ಪೂರೈಕೆ ಅಗತ್ಯವಿದ್ದರೆ, ಅಂಥವರಿಗೆ ಈ ಹೋಮ್ ಐಸೋಲೇಷನ್ ಕಾನ್ಸಂಟ್ರೇಟರುಗಳನ್ನು ತಕ್ಷಣವೇ ಕಳಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!