September 17, 2026
Thursday, September 17, 2026
spot_img

ಕೊಡಗಿಗೆ ವರುಣ ಕೃಪೆ: ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಸಚಿವರಿಂದ ವಿಶೇಷ ರುದ್ರಾಭಿಷೇಕ

ಹೊಸದಿಗಂತ ವರದಿ ಮಡಿಕೇರಿ:

ರಾಜ್ಯದ ಕೃಷಿ ಸಚಿವರೂ ಆಗಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಭಾನುವಾರ ಬೆಳಗ್ಗೆ ಕೊಡಗಿನ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಿ ಹೆಚ್ಚಿನ ಮಳೆಗಾಗಿ ಪ್ರಾರ್ಥಿಸಿದರು.

ಕೊಡಗಿನ ಮಳೆ ಹಾಗೂ ಬೆಳೆ ದೇವರೆಂದೇ ಪ್ರತೀತಿ ಹೊಂದಿರುವ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಮುಖ್ಯ ಅರ್ಚಕ ಕುಶಾಲ್ ಭಟ್ ಅವರು ರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದರು.

ಶನಿವಾರ ರಾತ್ರಿಯೇ ಕೊಡಗಿಗೆ ಆಗಮಿಸಿ ತಂಗಿದ್ದ ಸಚಿವರು, ಬೆಳಗ್ಗೆ 6 ಗಂಟೆಗೆ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮತ್ತಿತರರೊಂದಿಗೆ ದೇವಾಲಯದ ಪ್ರದಕ್ಷಿಣೆ ನಡೆಸಿದರು. ನಾಡಿನಾದ್ಯಂತ ಹೆಚ್ಚಿನ ಮಳೆಯಾಗಿ ಜಲಾಶಯಗಳು ಭರ್ತಿಯಾಗಬೇಕು, ಉತ್ತಮ ಬೆಳೆ ಬೆಳೆದು ಎಲ್ಲರಲ್ಲಿಯೂ ಸಮೃದ್ಧಿ ಹಾಗೂ ಸಂತಸ ನೆಲೆಸಬೇಕು ಎಂದು ಪಾಡಿ ಶ್ರೀ ಇಗ್ಗುತಪ್ಪನಲ್ಲಿ ಪ್ರಾರ್ಥಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ವತಿಯಿಂದ ಹೆಚ್ಚಿನ ಮಳೆಗಾಗಿ ಪುಣ್ಯಕ್ಷೇತ್ರ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಯಿ ಕಾವೇರಿ ಹಾಗೂ ಪಾಡಿ ಇಗ್ಗುತಪ್ಪನ ಪುಣ್ಯಭೂಮಿಯಲ್ಲಿ ಹೆಚ್ಚಿನ ಮಳೆಯಾದಲ್ಲಿ ನಾಡಿನ ಜಲಾಶಯಗಳು ಭರ್ತಿಯಾಗಲಿವೆ. ಇದರಿಂದ ಉತ್ತಮ ಬೆಳೆ ಜತೆಗೆ ಕುಡಿಯುವ ನೀರಿಗೂ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಹಾಗೂ ಇಗ್ಗುತಪ್ಪನಲ್ಲಿ ನಾಡಿನಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.

ನಾಡಿನ ಎಲ್ಲೆಡೆ ಉತ್ತಮ ಮಳೆಯಾಗಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಬೆಳೆ ಮತ್ತು ಮೇವು ದೊರೆಯುವಂತಾಗಿ ಸುಭಿಕ್ಷೆ ನೆಲೆಸಲಿ ಎಂದು ಸಚಿವರು ಆಶಿಸಿದರು.

ಕಾವೇರಿ ನದಿ ಪಾತ್ರದಲ್ಲಿ ಸರಾಸರಿ ಮಳೆಯಾಗುವುದರಿಂದ ಅಂತರರಾಜ್ಯ ಜಲ ವಿವಾದಗಳು ಇತ್ಯರ್ಥವಾಗಿ, ಶೇ.90ರಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ಎಲ್ಲರ ವಿಶ್ವಾಸ ಗಳಿಸಿ, ನಂಬಿಕೆಯಿಂದ ಕಾರ್ಯನಿರ್ವಹಿಸುವಲ್ಲಿ ಸರ್ಕಾರ ಶುಭ ಹೆಜ್ಜೆ ಇಟ್ಟಿದೆ. ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಅಗತ್ಯವಾಗಿದ್ದು, ಆ ದಿಸೆಯಲ್ಲಿ ದೇವರಲ್ಲಿ ಹೆಚ್ಚಿನ ಮಳೆಗಾಗಿ ಪ್ರಾರ್ಥಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವನ್ಯಜೀವಿ ಹಾವಳಿ ಬಗ್ಗೆ ಎಚ್ಚರಿಕೆ ಅಗತ್ಯ

ಕೊಡಗು ಜಿಲ್ಲೆಯಲ್ಲಿ ಪ್ರತಿನಿತ್ಯ ವನ್ಯಜೀವಿಗಳ ಭಯದಿಂದ ಜನರು ಬದುಕುವಂತಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಡಾನೆ ಹಾವಳಿಯ ಶಾಶ್ವತ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದರೂ ಪ್ರವಾಸಿಗರು, ಕಾರ್ಮಿಕರು ಸೇರಿದಂತೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು.

ಕೆಲವು ಸಂದರ್ಭಗಳಲ್ಲಿ ಅನಾಹುತ ಘಟನೆಗಳು ಸಂಭವಿಸುವ ಸಾಧ್ಯತೆಯಿದ್ದು, ಪ್ರತಿಯೊಬ್ಬರೂ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವರು ಹೇಳಿದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಹಾಗೂ ಪಾಡಿ ಇಗ್ಗುತಪ್ಪ ದೇವಾಲಯದ ಭಕ್ತ ಜನ ಸಮಿತಿ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಅವರು ಗಣ್ಯರನ್ನು ಸ್ವಾಗತಿಸಿದರು. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜಾ ಪೂವಣ್ಣ ಅವರು ಗಣ್ಯರಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು.

ನೆಲಜಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ, ಪ್ರಮುಖರಾದ ಬಿದ್ದಾಟಂಡ ಎಸ್. ತಮ್ಮಯ್ಯ, ಲವ ಚಿಣ್ಣಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !