ತಡರಾತ್ರಿ ಸೀಡ್ಸ್ ಹಾಗಲಕಾಯಿ ನಾಶ ಮಾಡಿದ ದುರುಳರು: ದುಷ್ಟರ ಕೃತ್ಯಕ್ಕೆ ರೈತನ ಕಣ್ಣೀರು

ಹೊಸದಿಗಂತ ವರದಿ ಹಾವೇರಿ:

ಬರದಿಂದ ಬಳಲಿ ಬೆಂಡಾಗಿರುವ ರೈತ ಸಮುದಾಯ ಏನಾದರೂ ಸಣ್ಣ ಪುಟ್ಟ ಕೃಷಿ ಮಾಡಿ ಬದುಕು ಕಾಣಲು ಹೆಣಗಾಡುತ್ತಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಹೊಸ ಚಿಂತನೆಯೊಂದಿಗೆ ಸೀಡ್ಸ್ ಮಾಡಿದ್ದ ರೈತನೀಗ ದುಷ್ಟರಿಂದ ಕಣ್ಣೀರಿಡುವಂತಾಗಿದೆ.

ಹಿರೇಕೆರೂರ ತಾಲೂಕಿನ ಆಲದಗೇರಿ ಗ್ರಾಮದ ರೈತ ರಾಜಪ್ಪ ಹಿತ್ತಲಮನಿ ಸೀಡ್ಸ್ ಹಾಗಲಕಾಯಿ ಬೆಳೆದು ತಕ್ಕಮಟ್ಟಿಗೆ ಬದುಕು ನಡೆಸಲು ಮುಂದಾಗಿದ್ದರು. ಆದರೆ ಕಟಾವು ಹಂತದಲ್ಲಿದ್ದ ಬೆಳೆ
ದುರುಳರಿಂದ ನಾಶವಾಗಿದೆ.

ಒಟ್ಟು ಮೂರು ಎಕರೆ ಜಮೀನು ಹೊಂದಿರುವ ರೈತ, ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಪುಟ್ಟ ಕುಟುಂಬವನ್ನು ಹೊಂದಿದ್ದು, ಅರ್ಧ ಎಕರೆ ಜಮೀನಿನಲ್ಲಿ 2.5ಲಕ್ಷ ಹಣ ವ್ಯಯಿಸಿ ಸೀಡ್ಸ್ ಹಾಗಲಕಾಯಿ ಬೆಳೆದಿದ್ದನು. ಬರದ ಮಧ್ಯೆಯೂ ಕಷ್ಟಪಟ್ಟು ನೀರುಣಿಸಿ ಬೆಳೆಸಿದ್ದ ಕಟಾವು ಹಂತದಲ್ಲಿದ್ದ ಸೀಡ್ಸ್ ಹಾಗಲಕಾಯಿ ಬೆಳೆಯನ್ನು ಗುರುವಾರ ತಡರಾತ್ರಿ ಅನಾಮಿಕ ದುರುಳರು ನಾಶಪಡಿಸಿದ್ದಾರೆ.

ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿತ್ತು, ಅದಕ್ಕಾಗಿ ಸಂಬಂಧಿಸಿದ ಸೀಡ್ಸ್ ಅಧಿಕಾರಿಗಳಿಂದಲೂ ಕಟಾವಿಗೆ ದಿನಾಂಕ ಪಡೆದಿದ್ದ. ಕಟಾವಿಗೆ ಆಳುಗಳನ್ನು ಕೂಡ ಸಿದ್ದಮಾಡಿಕೊಳ್ಳಲಾಗಿತ್ತು, ಆದರೆ ಇದೀಗ ಕೆಲ ದುಷ್ಟರ ದುಷ್ಕೃತ್ಯದಿಂದ ಬಡ ರೈತ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಸುಮಾರು 2ಲಕ್ಷ ಕ್ಕೂ ಹೆಚ್ಚಿನ ಮೊತ್ತದ ಬೆಳೆ ಹಾನಿಯಾಗಿದೆ.

ಪೊಲೀಸರು, ಕೃಷಿ ಮತ್ತು ಸೀಡ್ಸ್ ಕಂಪನಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಅನಾಮಿಕ ವ್ಯಕ್ತಿಗಳ ಮೇಲೆ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!