ರೂ.13.24 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ

ಹೊಸದಿಗಂತ ವರದಿ,ಮಡಿಕೇರಿ:

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಕ್ಕಂದೂರು, ಕೆ.ನಿಡುಗಣೆ, ಹೊದ್ದೂರು, ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 13.24 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಮಡಿಕೇರಿ ತಾಲೂಕಿನ ಮಕ್ಕಂದೂರು ಬಳಿ ಗ್ರಾಮೀಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಿಂದ ಕೊಡಗು ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಆ ದಿಸೆಯಲ್ಲಿ ಪ್ರತೀ ಗ್ರಾ.ಪಂ.ಗಳ ಗ್ರಾಮೀಣ ರಸ್ತೆ, ಸೇತುವೆ ಮತ್ತಿತರ ಮೂಲಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಈಗಾಗಲೇ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 48 ಗ್ರಾ.ಪಂ.ಗಳಲ್ಲಿ 20 ಗ್ರಾ.ಪಂ.ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಬಾಕಿ 28 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಲಾಗುತ್ತದೆ ಎಂದು ಶಾಸಕರು ಹೇಳಿದರು.
ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ಮಾಣ ಮಾಡಬೇಕು. ಸ್ಥಳೀಯರು ಕಾಮಗಾರಿ ವೀಕ್ಷಣೆ ಮಾಡುವಂತಾಗಬೇಕು ಎಂದು ಶಾಸಕರು ಸಲಹೆ ಮಾಡಿದರು.
ಈ ಹಿಂದೆ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಎಂಜಿನಿಯರ್‌’ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅಪ್ಪಚ್ಚು ರಂಜನ್ ಅವರು ತಿಳಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್‍ಗಳಿಗೆ ಭೇಟಿ ನೀಡಿ, ವಿವಿಧ ಗ್ರಾ.ಪಂ.ಗಳಲ್ಲಿ ಆಗಬೇಕಿರುವ ಕೆಲಸಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲಾಗುತ್ತದೆ ಎಂದೂ ಅವರು ತಿಳಿಸಿದರು.
ಮಕ್ಕಂದೂರು ಗ್ರಾಮದ ಪ್ರಮುಖರಾದ ನಾಪಂಡ ರವಿಕಾಳಪ್ಪ ಅವರು ಮಕ್ಕಂದೂರು ಗ್ರಾ.ಪಂ.ವ್ಯಾಪ್ತಿಗೆ ಶಾಸಕರು ರಸ್ತೆ, ಸೇತುವೆ, ಕುಡಿಯುವ ನೀರು ಮತ್ತಿತರ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳಿಗೆ 3 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.
ಜಿ.ಪಂ.ಮಾಜಿ ಅಧ್ಯಕ್ಷ ಬಿ.ಎ.ಹರೀಶ್, ಮಕ್ಕಂದೂರು ಗ್ರಾ.ಪಂ.ಅಧ್ಯಕ್ಷ ಕನ್ನಿಕಂಡ ಶ್ಯಾಮ್ ಸುಬ್ಬಯ್ಯ, ಉಪಾಧ್ಯಕ್ಷೆ ಪಿ.ಎಸ್.ಕವಿತಾ, ಸದಸ್ಯರಾದ ಗಣೇಶ್, ದೀನಾ, ರಮೇಶ್, ವಿಮಲಾ, ಸುಮಿತ್ರ, ಸುನಂದ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!