September 24, 2026
Thursday, September 24, 2026
spot_img

ಅನಂತ್ ನಾಗ್‌ ಅಭಿನಂದನೆಗೂ ‘ಶಾಸಕರ ಬರ’: ಖಾಲಿ ಬೆಂಚು ಕಂಡು ವಿಧಾನಸಭೆಯಲ್ಲಿ ವಿಪಕ್ಷ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಅನಂತ್ ನಾಗ್ ಅವರಿಗೆ ಕರ್ನಾಟಕ ವಿಧಾನಸಭೆಯಲ್ಲಿ ಅಭಿನಂದನೆ ಸಲ್ಲಿಸುವ ಸಂದರ್ಭವೇ ಆಡಳಿತ ಪಕ್ಷದ ಸದಸ್ಯರ ಗೈರುಹಾಜರಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

ಸದನ ಆರಂಭವಾದಾಗ ಆಡಳಿತ ಪಕ್ಷದ ಬಹುತೇಕ ಆಸನಗಳು ಖಾಲಿಯಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಖಾಲಿ ಸದನದಲ್ಲಿ ಅನಂತ್ ನಾಗ್ ರನ್ನು ಅಭಿನಂದಿಸುವ ಪರಿಸ್ಥಿತಿ

ಅನಂತ್ ನಾಗ್ ಅವರಂತಹ ಹಿರಿಯ ಕಲಾವಿದರಿಗೆ ಸದನದಲ್ಲಿ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕಿತ್ತು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅಭಿಪ್ರಾಯಪಟ್ಟರು. ಖಾಲಿ ಸದನದಲ್ಲಿ ಅನಂತ್ ನಾಗ್ ಅವರನ್ನು ಅಭಿನಂದಿಸುವ ಪರಿಸ್ಥಿತಿ ಅವರ ಸಾಧನೆಗೆ ಸೂಕ್ತ ಗೌರವ ನೀಡಿದಂತಾಗುವುದಿಲ್ಲ ಎಂದು ಅವರು ಆಕ್ಷೇಪಿಸಿದರು.

ಇದನ್ನೂ ಓದಿ:

ಇದೇ ವೇಳೆ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು, ಆಡಳಿತ ಪಕ್ಷದ ಬೆಂಚುಗಳಲ್ಲೇ ‘ಶಾಸಕರ ಬರ’ ಕಾಣಿಸುತ್ತಿದೆ ಎಂದು ವ್ಯಂಗ್ಯವಾಡಿದರು. ಹೆಚ್ಚಿನ ಸಚಿವರು ಹಾಗೂ ಶಾಸಕರು ಸದನಕ್ಕೆ ಆಗಮಿಸುವವರೆಗೆ ಕಲಾಪವನ್ನು ಕೆಲಕಾಲ ಮುಂದೂಡಬೇಕು ಎಂದು ಅಶೋಕ್ ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರನ್ನು ಒತ್ತಾಯಿಸಿದರು.

ಆಡಳಿತ-ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ

ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಅಭಿನಂದನಾ ನಿರ್ಣಯದ ಕಲಾಪವನ್ನು ಮುಂದುವರಿಸುವಂತೆ ಮನವಿ ಮಾಡಿದರು. ಉಳಿದ ಸದಸ್ಯರು ಶೀಘ್ರದಲ್ಲೇ ಸದನಕ್ಕೆ ಆಗಮಿಸಲಿದ್ದಾರೆ ಎಂದು ಭರವಸೆ ನೀಡಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಸ್ಪೀಕರ್ ಕಲಾಪವನ್ನು ಕೆಲಕಾಲ ಮುಂದೂಡಿದರು.

ನಂತರ ವಿಧಾನಸಭೆಯಲ್ಲಿ ಅನಂತ್ ನಾಗ್ ಅವರ ದೀರ್ಘಕಾಲದ ಕಲಾ ಸೇವೆಯನ್ನು ಸ್ಮರಿಸಿ ಅಭಿನಂದನಾ ನಿರ್ಣಯ ಮಂಡಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !