ಹೊಸದಿಗಂತ ವರದಿ, ಚಿತ್ರದುರ್ಗ:
ಜಿಲ್ಲೆಯಲ್ಲಿ ೧೫ ರಿಂದ ೧೮ ವರ್ಷದೊಳಗಿನ ವಯಸ್ಸಿನ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್-೧೯ ಲಸಿಕೆ ನೀಡುವ ಲಸಿಕಾ ಅಭಿಯಾನಕ್ಕೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಸೋಮವಾರ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ಕೋವಿಡ್‌ನಿಂದ ಬಹಳಷ್ಟು ನೋವು ಹಾಗೂ ತೊಂದರೆಗಳನ್ನು ಅನುಭವಿಸಲಾಗಿದೆ. ಕೋವಿಡ್ ತಡೆಗೆ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಇಲ್ಲಿಯವರೆಗೆ ೧೪೮ ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಉಚಿತವಾಗಿ ನೀಡಿದೆ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳ ರಕ್ಷಣೆಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ೧೫ ರಿಂದ ೧೮ ವರ್ಷ ವಯೋಮಿತಿಯ ಮಕ್ಕಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅರ್ಹರೆಲ್ಲರೂ ಲಸಿಕೆ ಹಾಕಿಸಿಕೊಂಡು ಕೋವಿಡ್ ರೋಗದಿಂದ ಮುಕ್ತರಾಗಬೇಕು. ಕೋವಿಡ್ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಶುಭಹಾರೈಸಿದರು.
ಕೋವಿಡ್ ರೂಪಾಂತರಗೊಳ್ಳುತ್ತಿದ್ದು, ಇದೀಗ ಒಮಿಕ್ರಾನ್ ಆವರಿಸಿದೆ. ಇದನ್ನು ಹೊಡೆದೊಡಿಸಲು ನಾವುಗಳು ಸಜ್ಜಾಗಬೇಕು. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಬರುವುದಿಲ್ಲ. ಎಲ್ಲರೂ ಭಯಪಡದೇ ಕೋವಿಡ್ ಲಸಿಕೆ ಪಡೆದು ಸರ್ಕಾರದ ಮಾರ್ಗಸೂಚಿಯಂತೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವ ಮೂಲಕ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ನೂತನ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಕೋವಿಡ್ ಲಸಿಕೆ ಸುರಕ್ಷಿತವಾಗಿದೆ. ಯಾವುದೇ ಭಯಪಡುವ ಅಗತ್ಯವಿಲ್ಲ. ಎಲ್ಲರೂ ಲಸಿಕೆ ಪಡೆದು ಕೋವಿಡ್‌ನಿಂದ ರಕ್ಷಣೆ ಪಡೆಯಲು ಮುಂದಾಗಬೇಕು ಎಂದು ಹೇಳಿದರು.
ಕೋವಿಡ್ ನಿಯಂತ್ರಣಕ್ಕೆ ರಾಯಬಾರಿಗಳಂತೆ ಮಕ್ಕಳು ಕೆಲಸ ಮಾಡಬೇಕು. ತಂದೆ, ತಾಯಿ, ಪೋಷಕರು, ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ತೆರಳುವ ಸಂದರ್ಭದಲ್ಲಿ ಅವರಿಗೆ ಕೋವಿಡ್ ನಿಯಮಾವಳಿಗಳನ್ನು ತಿಳಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಉಪಕೇಂದ್ರ ವ್ಯಾಪ್ತಿಯ ಆಯ್ದ ಗ್ರಾಮದ ಶಾಲೆಗಳಲ್ಲಿ ೧೫ ರಿಂದ ೧೮ ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯ ೭೬೧೪೨ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಫಲಾನುಭವಿಗಳಿಗೆ ಲಸಿಕೆ ನೀಡಲು ಒಟ್ಟು ೩೪೩ ಲಸಿಕಾ ಕೇಂದ್ರಗಳನ್ನು ರಚಿಸಲಾಗಿದೆ ಎಂದರು.
ಲಸಿಕೆ ನೀಡಲು ಪೂರ್ವ ತಯಾರಿಯಾಗಿ ಸಂಬಂಧಿಸಿದ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ, ತಹಶೀಲ್ದಾರ್ ಸತ್ಯನಾರಾಯಣ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸವರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲಾ-ಕಾಲೇಜಿನ ಮಕ್ಕಳು ಉಪಸ್ಥಿತರಿದ್ದರು