MLA ಟಿಕೆಟ್ ವಂಚನೆ ಪ್ರಕರಣ: ಅಭಿನವ ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ. 19ಕ್ಕೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

MLA ಟಿಕೆಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ 3ನೇ ಆರೋಪಿ ಅಭಿನವ ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಬೆಂಗಳೂರಿನ ಸಿಸಿಹೆಚ್ 57 ಕೋರ್ಟ್​ ಮುಂದೂಡಿದೆ.

ಅಭಿನವ ಹಾಲಶ್ರೀ ಪರ ವಕೀಲ ಅರುಣ್ ಶ್ಯಾಮ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ​ ಅರ್ಜಿ ಸಲ್ಲಿಸಿದ್ದರು. ವಂಚನೆ ಪ್ರಕರಣದಲ್ಲಿ ಹಾಲಶ್ರೀ ವಿರುದ್ಧ ಯಾವುದೇ ಆರೋಪವಿಲ್ಲ. ಚೈತ್ರಾ ಕುಂದಾಪುರ ವಿರುದ್ಧ ಮಾತ್ರ ವಂಚನೆ ಆರೋಪವಿದೆ. ಹೀಗಾಗಿ ಅಭಿನವ ಹಾಲಶ್ರೀಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದರು.

ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಹಾಗಾಗಿ ಸೆ.19ಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ಇನ್ನು ಹಾಲಶ್ರೀಗೆ ನಿರೀಕ್ಷಣಾ ಜಾಮೀನು ನೀಡದಂತೆ ಉದ್ಯಮಿ ಗೋವಿಂದಬಾಬು ಪೂಜಾರಿ ಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಇದರ ನಡುವೆ ಹಾಲಶ್ರೀ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಡರಾತ್ರಿ ಆಂಧ್ರಪ್ರದೇಶದಲ್ಲಿ ಕಾರು ಚಾಲಕ ಪತ್ತೆಯಾಗಿದ್ದು, ಆತನ ವಿಚಾರಣೆ ನಡೆಸಿದರೆ ಶ್ರೀಗಳ ಸುಳಿವು ಪತ್ತೆಯಾಗುವ ಸಾಧ್ಯತೆಯಿದೆ.

ಜೊತೆಗೆ MLA ಟಿಕೆಟ್ ಕೊಡಿಸುವುದಾಗಿ ವಂಚಿಸಿ, ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗಿತ್ತಿದೆ ಎಂದು ಉದ್ಯಮಿ ಗೋವಿಂದಬಾಬು ಪೂಜಾರಿ ವಿರುದ್ಧವೇ ಅಭಿನವ ಹಾಲಶ್ರೀ ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!