ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆಯ ಕಾಲೇಜೊಂದರಲ್ಲಿ ಆಫೀಸ್ ರೂಮ್‌ನಲ್ಲಿದ್ದ ಪ್ರಧಾನಿ ಮೋದಿಯ ಭಾವಚಿತ್ರವನ್ನು ತೆಗೆದುಹಾಕಿದ ಆರೋಪದ ಮೇಲೆ ಮುಂಬೈನ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆಫೀಸ್ ರೂಮ್‌ನಲ್ಲಿದ್ದ ಛತ್ರಪತಿ ಶಿವಾಜಿ ಮಹಾರಾಜರ ಫೋಟೊ ಪಕ್ಕದಲ್ಲಿದ್ದ ಪ್ರಧಾನಿ ಮೋದಿ ಅವರ ಫೋಟೊವನ್ನು ತೆಗೆದು ಹಾಕಿದ ಆಶಿಶ್ ಸಬಲ್ ಎನ್ನುವ ಕಾರ್ಯಕರ್ತನನ್ನು ಮುಂಬೈನಲ್ಲಿ ಪುಣೆ ಪೊಲೀಸರು ಬಂಧಿಸಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ವರದಿಗಳ ಪ್ರಕಾರ ಕಾಲೇಜಿಗೆ ಎಂಎನ್‌ಎಸ್ ನಾಯಕ ಅಮಿತ್ ಠಾಕ್ರೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಕಾರ್ಯಕರ್ತರಿಗೆ ಪ್ರಧಾನಿ ಮೋದಿಯ ಫೋಟೊವನ್ನು ತೆಗೆದುಹಾಕುವಂತೆ ಸೂಚಿಸಿದ್ದರು ಎನ್ನಲಾಗಿದೆ. ತದನಂತರ ಈ ಘಟನೆಗೆ ಸಂಬಂಧಪಟ್ಟಂತೆ ಅಮಿತ್ ಠಾಕ್ರೆ ಹಾಗೂ 25 ಎಂಎನ್‌ಎಸ್ ಕಾರ್ಯಕರ್ತರ ವಿರುದ್ಧ ಚತುರ್ಶಿಂಗಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈವರೆಗೂ ಮೂವರನ್ನು ಬಂಧಿಸಲಾಗಿದೆ.
ಬಿಜೆಪಿ ಆಕ್ರೋಶ
ಅಮಿತ್ ಠಾಕ್ರೆ ಹಾಗೂ ಇತರ ಕಾರ್ಯಕರ್ತರು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊ ತೆಗೆದುಹಾಕಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆಯೇ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಕಾರ್ಯಕರ್ತರು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ನಿವಾಸದ ಮುಂದೆಯೂ ಪ್ರತಿಭಟನೆ ಮಾಡುತ್ತಾರೆ ಎನ್ನುವ ವಿಷಯ ವೈರಲ್ ಆಗಿದೆ. ಈ ಬೆನ್ನಲ್ಲೇ ಅವರನ್ನು ಸ್ವಾಗತಿಸುತ್ತೇವೆ ಎಂದು ನೂರಾರು ಸಂಖ್ಯೆಯಲ್ಲಿ ಎಂಎನ್‌ಎಸ್ ಕಾರ್ಯಕರ್ತರು ಜಮಾಯಿಸಿದ್ದಾರೆ.
ಯಾರು ಬರ್ತೀರೋ ಬನ್ನಿ ನೋಡೋಣ
ಬಿಜೆಪಿ ಪ್ರತಿಭಟನೆಗೆ ಬರಬಹುದು ಎನ್ನುವ ಸುದ್ದಿ ಸಿಕ್ಕಿದೆ. ಅದಕ್ಕೆ ಅವರಿಗಿಂತ ಮುಂಚೆ ನಾವೇ ಬಂದಿದ್ದೇವೆ. ಅವರನ್ನು ಸ್ವಾಗತ ಮಾಡಲು ಯಾರಾದರೂ ಇರಬೇಕಲ್ಲವೇ? ಯಾರು ಬರುತ್ತೀರೋ ಬನ್ನಿ. ನಮಗೂ ಕಾದು ಕಾದು ಸಾಕಾಗಿದೆ. ಬರೀ ಖಾಲಿ ಬೆದರಿಕೆಗಳನ್ನು ನೀಡುವುದು ಈಕೂಡಲೇ ನಿಲ್ಲಲಿ. ನಿಮ್ಮ ಜೊತೆಗೆ ಕೆಲ ಆಂಬುಲೆನ್ಸ್‌ಗಳನ್ನು ಕರೆತನ್ನಿ. ಯಾಕಂದ್ರೆ ವಾಪಾಸ್ ಹೋಗೋಕೆ ತೊಂದರೆಯಾಗಬಹುದು ಎಂದು ಎಂಎನ್‌ಎಸ್‌ನ ನಾಯಕಿ ಮಹೀಂದ್ರಾ ಭಾನುಶಾಲಿ ಹೇಳಿದ್ದಾರೆ.



