ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 1,204 ಕ್ಕೆ ಏರಿಕೆಯಾಗಿದೆ. ಹಗಲು ರಾತ್ರಿ ಎಂದು ನೋಡದೇ ದಿನದ 24 ಗಂಟೆಯೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲೋಕ್ ಬಹದ್ದೂರ್ ಮಾಹಿತಿ ನೀಡಿದ್ದಾರೆ.
ಈವರೆಗೂ ಪ್ರವಾಹದಿಂದ 11,993 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನು 1,114ಕ್ಕೂ ಹೆಚ್ಚು ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಒಟ್ಟಾರೆ 3,900 ಜನರ ಬಗ್ಗೆ ಯಾವುದೇ ಮಾಹಿತಿ ಒದಗಿಲ್ಲ ಎಂದು ಹೇಳಿದ್ದಾರೆ. ಮೃತದೇಹಗಳಲ್ಲಿ ಕೆಲವು ಮಾತ್ರ ಯಾರದ್ದು ಎಂದು ತಿಳಿದುಬಂದಿದೆ. ಇನ್ನುಳಿದ ಮೃತದೇಹಗಳ ಅಂತ್ಯಕ್ರಿಯೆಯನ್ನು ಸರ್ಕಾರ ಮಾಡುತ್ತಿದೆ. ಗುರುತು ಸಿಗದ ಮೃತದೇಹಗಳ ಡಿಎನ್‌ಎ ಸ್ಯಾಂಪಲ್ ರಕ್ಷಣೆ ಮಾಡಲಾಗಿದೆ. ಕುಟುಂಬದ ಸದಸ್ಯರು ಮಿಸ್ಸಿಂಗ್ ಆಗಿದ್ದಲ್ಲಿ ಮಹಾರಾಜ್‌ಗುಂಜ್‌ನಲ್ಲಿರುವ ನೇಪಾಳ ಪೊಲೀಸ್ ಆಸ್ಪತ್ರೆ ಅಥವಾ ಜಿಲ್ಲಾ ಪೊಲೀಸ್ ಕಚೇರಿಗೆ ತೆರಳಿ ಡಿಎನ್‌ಎ ಗುರುತಿಸಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
19 ಸದಸ್ಯರ ಭಾರತೀಯ ಫೋರೆನ್ಸಿಕ್ ತಂಡ ನೇಪಾಳ ಪೊಲೀಸರ ಜತೆ ಸೇರಿ ಡಿಎನ್‌ಎ ಗುರುತಿಸುವ ಪ್ರಕ್ರಿಯೆಯನ್ನು ನೆರೆವೇರಿಸುತ್ತಿದೆ. ಚೀನಾ, ಸಿಂಗಾಪುರ ಹಾಗೂ ದಕ್ಷಿಣ ಕೊರಿಯಾದ ವಿಶೇಷ ತಂಡಗಳು ವಿಭಿನ್ನ ಉಪಕರಣಗಳನ್ನು ನೀಡಿ ಸಹಕರಿಸಿವೆ ಎಂದು ಹೇಳಿದ್ದಾರೆ. ನೇಪಾಳಿ ಸೇನೆ, ನೇಪಾಳ ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಪಡೆಗಳ ರಕ್ಷಣಾ ಘಟಕಗಳು ಭಾರತ, ಚೀನಾ ಹಾಗೂ ದಕ್ಷಿಣ ಕೊರಿಯಾದ ಅಂತಾರಾಷ್ಟ್ರೀಯ ತಜ್ಞರೊಂದಿಗೆ ಸಂಪರ್ಕದಲ್ಲಿವೆ.
ಲ್ಯಾಂಗ್ಟಾಂಗ್, ಚಿಲಿಮ್ ಮತ್ತು ಅಪ್ಪರ್ ತ್ರಿಸುಲಿಯಂತಹ ಸ್ಥಳಗಳಲ್ಲಿ ಜನರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ. ಇಲ್ಲಿ ಅಂಡರ್‌ಗ್ರೌಂಡ್ ಜಲವಿದ್ಯುತ್ ರಚನೆಗಳಿಂದ ಮಣ್ಣು ಮತ್ತು ಬಂಡೆಗಳು ಹೆಂಟೆಯಾಗಿ ಬಿದ್ದಿವೆ. ಇವುಗಳನ್ನು ತೆಗೆಯುವ ಕೆಲಸ ಮಾಡಲಾಗುತ್ತಿದೆ. ಈವರೆಗೂ 300ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಸುರಕ್ಷಿತ ತಾಣಗಳಿಗೆ ತಲುಪಿಸಲಾಗಿದೆ. ಒಟ್ಟಾರೆ 34 ದೇಶಗಳ 590 ವಿದೇಶಿ ನಾಗರಿಕರು ಕಾಣೆಯಾಗಿದ್ದು, ಹುಡುಕಾಟ ನಡೆಯುತ್ತಿದೆ.



