ಹೊಸ ದಿಗಂತ ವರದಿ, ತುಮಕೂರು:
ವಿಧಾನಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಿರಾ ತಾಲೂಕು ಹೆಂದೊರೆ ಗ್ರಾಮ ಪಂಚಾಯತಿ ಮೇಲ್ವಿಚಾರಕ ಸಣ್ಣ ಮಂಜುನಾಥ ಬಿನ್ ಭೀಮಣ್ಣ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಶಿರಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಎಂ.ಸಿ.ಸಿ ನೋಡಲ್ ಅಧಿಕಾರಿ ಅನಂತರಾಜು ಪಿ.ಎಸ್. ಆದೇಶಿಸಿದ್ದಾರೆ.
ಸಣ್ಣ ಮಂಜುನಾಥ ಅವರು ಸರ್ಕಾರಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆಯಲ್ಲಿ ಜಾಲತಾಣ(ಫೇಸ್ ಬುಕ್)ದಲ್ಲಿ ರಾಜಕೀಯ ಪಕ್ಷಗಳ ಪರವಾಗಿ ತಮ್ಮ ಛಾಯಾಚಿತ್ರ ಇರುವ ಫೋಟೋ ಅನ್ನು ಅಪ್ಲೋಡ್ ಮಾಡಿರುವ ಬಗ್ಗೆ ಹೆಂದೊರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸಣ್ಣ ಮಂಜುನಾಥ ಅವರು ಗ್ರಾಮ ಪಂಚಾಯತಿ ಹಂತದಲ್ಲಿ ಸರ್ಕಾರಿ ಅಧೀನ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ರಾಜಕೀಯ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವುದು ಪರಿಶೀಲನೆಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ. ಮಾದರಿ ನೀತಿ ಸಂಹಿತೆಯಡಿ ಯಾವುದೇ ಸರ್ಕಾರಿ ಅಧಿಕಾರಿ/ನೌಕರರು ಪ್ರಜಾ ಪ್ರತಿನಿಧಿ ಕಾಯ್ದೆ1951ರಡಿ ಯಾವುದೇ ರಾಜಕೀಯ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗುವಂತಿಲ್ಲ.
ಸಣ್ಣ ಮಂಜುನಾಥ ಅವರು ಚುನಾವಣೆಯಂತಹ ಮಹತ್ವದ ಕಾರ್ಯದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿರುವ ಕುರಿತು ದೂರುಗಳು ಬಂದಿದ್ದರಿಂದ ಸದರಿ ಸಿಬ್ಬಂದಿಗೆ 24 ಗಂಟೆಯೊಳಗಾಗಿ ಲಿಖಿತ ರೂಪದಲ್ಲಿ ವಿವರಣೆ ನೀಡಲು ಸೂಚಿಸಿ ಕಾರಣ ಕೇಳಿ ನೋಟೀಸ್ ನೀಡಿದ್ದರೂ ಈವರೆಗೂ ಉತ್ತರಿಸಿರುವುದಿಲ್ಲದೆ ಇರುವುದರಿಂದ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ವರದಿ ಸಲ್ಲಿಸಿರುತ್ತಾರೆ.