ಮನ್ ಕಿ ಬಾತ್ ನಲ್ಲಿ ಈ ಬಾರಿ ಮತ್ತೆ ಕರ್ನಾಟಕ ನೆನಪಿಸಿಕೊಂಡಿದ್ದಾರೆ ಮೋದಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮನ್ ಕಿ ಬಾತ್ ನಲ್ಲಿ ಈ ಬಾರಿ ಮತ್ತೆ ಕರ್ನಾಟಕ ನೆನಪಿಸಿಕೊಂಡಿದ್ದಾರೆ ಮೋದಿ. ಭಾನುವಾರ ತಮ್ಮ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ 92 ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ದೇಶದ ಹಲವು ರಾಜ್ಯಗಳಲ್ಲಿ ನಿರ್ಮಾಣವಾಗುತ್ತಿರುವ ʻಅಮೃತ ಸರೋವರʼ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ಮೋದಿ ಅವರು ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೃತ ಸರೋವರ ಅಭಿಯಾನ ಕರ್ನಾಟಕದಲ್ಲಿಯೂ ಜೋರಾಗಿ ನಡೆಯುತ್ತಿದೆ ಎಂದರು.

ಇಲ್ಲಿನ ಬಾಗಲಕೋಟೆ ಜಿಲ್ಲೆಯ ‘ಬಿಲ್ಕೆರೂರು’ ಗ್ರಾಮದಲ್ಲಿ ಜನರು ಅತ್ಯಂತ ಸುಂದರವಾದ ʻಅಮೃತ ಸರೋವರʼವನ್ನು ನಿರ್ಮಿಸಿದ್ದಾರೆ. ವಾಸ್ತವವಾಗಿ, ಈ ಪ್ರದೇಶದಲ್ಲಿ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮಳೆಗಾಲದಲ್ಲಿ ಬೆಟ್ಟ-ಗುಡ್ಡಗಳಿಂದ ಹರಿದು ಬರುವ ನೀರು ಬೆಳೆಯನ್ನೆಲ್ಲಾ ಹಾಳು ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿತ್ತು. ಇದರಿಂದ ಮುಕ್ತಿ ಪಡೆಯಲು ಅಮೃತ ಸರೋವರ ಅಭಿಯಾನದಡಿ ಗ್ರಾಮದ ಜನರೇ ಸ್ವತಃ ಒಂದು ಚಾನಲ್ ನಿರ್ಮಿಸಿ ಆ ಮೂಲಕ ನೀರನ್ನೆಲ್ಲಾ ಕೆರೆಗೆ ಬರುವಂತೆ ಮಾಡಿದರು. ಇದರಿಂದ ಆ ಪ್ರದೇಶದಲ್ಲಿ ಇದೀಗ ಅತೀ ಮಳೆಯಾದಾಗ ಉಂಟಾಗುತ್ತಿದ್ದ ಪ್ರವಾಹ ಸಮಸ್ಯೆಯೂ ಬಗೆಹರಿದಿದೆ ಎಂದರು.

ಅಮೃತ್ ಸರೋವರ ಅಭಿಯಾನವು ಇಂದು ನಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಇದು ನಮ್ಮ ಮುಂದಿನ ಪೀಳಿಗೆಗೂ ಅಷ್ಟೇ ಅವಶ್ಯಕ. ಈ ಅಭಿಯಾನದ ಅಡಿಯಲ್ಲಿ, ಅನೇಕ ಸ್ಥಳಗಳಲ್ಲಿ, ಹಳೆಯ ಜಲಮೂಲಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಅಮೃತ ಸರೋವರಗಳನ್ನು ಪ್ರಾಣಿಗಳ ದಾಹ ನೀಗಿಸಲು ಹಾಗೂ ಬೇಸಾಯಕ್ಕೆ ಬಳಸಲಾಗುತ್ತಿದೆ. ಈ ಕೆರೆಗಳಿಂದಾಗಿ ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಸುತ್ತಲೂ ಹಸಿರು ಕೂಡ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಅಮೃತ್ ಸರೋವರದಲ್ಲಿ ಮೀನು ಸಾಕಣೆಗೆ ಹಲವೆಡೆ ಜನರು ಸಿದ್ಧತೆ ನಡೆಸುತ್ತಿದ್ದಾರೆ. ಅಮೃತ್ ಸರೋವರ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ನೀರಿನ ಸಂರಕ್ಷಣೆ ಮತ್ತು ನೀರಿನ ಸಂಗ್ರಹಣೆಯ ಈ ಪ್ರಯತ್ನಗಳಿಗೆ ಸಂಪೂರ್ಣ ಶಕ್ತಿಯನ್ನು ನೀಡುವಂತೆ ಮತ್ತು ಅವುಗಳನ್ನು ಮುಂದಕ್ಕೆ ಕೊಂಡೊಯ್ಯಲು ನಾನು ನೀವೆಲ್ಲರೂ ಮುಂದೆ ಬರಬೇಕೆಂದು ಬಯಸುತ್ತೇನೆ ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!