August 21, 2026
Friday, August 21, 2026
spot_img

ಇಟಲಿ ಪ್ರಧಾನಿಯಿಂದ ‘ವಿಶೇಷ ಸ್ವಾಗತ’: ಸಾಮಾಜಿಕ ಜಾಲತಾಣಗಳಲ್ಲಿ ಮೋದಿ-ಮೆಲೋನಿ ಫೋಟೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಐದು ದೇಶಗಳ ಪ್ರವಾಸದ ಅಂತಿಮ ಹಂತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಟಲಿಯ ರಾಜಧಾನಿ ರೋಮ್‌ಗೆ ತಲುಪಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಮೋದಿಗೆ ಅತ್ಯಂತ ಆತ್ಮೀಯ ಸ್ವಾಗತವನ್ನು ಕೋರಿದ್ದಾರೆ.

ಈ ವೇಳೆ “ಗೆಳೆಯ” ಪ್ರಧಾನಿ ಮೋದಿ ಜತೆಗಿನ ಫೋಟೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಮೆಲೋನಿ, ರೋಮ್‌ಗೆ ಸುಸ್ವಾಗತ, ನನ್ನ ಗೆಳೆಯನೇ! ಎಂದು ಬರೆದುಕೊಂಡಿದ್ದಾರೆ ಹಾಗೂ ಇಟಲಿ ಮತ್ತು ಭಾರತದ ರಾಷ್ಟ್ರಧ್ವಜಗಳ ಎರಡು ಎಮೋಜಿಗಳನ್ನು ಬಳಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇವರಿಬ್ಬರ ಅಂತಾರಾಷ್ಟ್ರೀಯ ಸ್ನೇಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

60,000 ಲೈಕ್ಸ್ & ಕಮೆಂಟ್ಸ್‌

ಈ ಫೋಟೋವು ರೋಮ್‌ನ ಮಧ್ಯಭಾಗದಲ್ಲಿರುವ, ಮೂಲತಃ ಫ್ಲೇವಿಯನ್ ಆಂಫಿಥಿಯೇಟರ್ ಎಂದು ಕರೆಯಲ್ಪಡುವ ಬೃಹತ್ ಕಲ್ಲಿನ ಅಂಡಾಕಾರದ ಭವ್ಯ ರಚನೆಯಾದ ‘ಕೊಲೋಸಿಯಮ್’ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದನ್ನು ಕಾಣಬಹುದು. ವೈರಲ್ ಆಗಿರುವ ಈ ಫೋಟೋ ಈಗಾಗಲೇ ಹತ್ತು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಸುಮಾರು 60,000 ಲೈಕ್ಸ್ ಹಾಗೂ ಇಬ್ಬರು ಜಾಗತಿಕ ನಾಯಕರ ನಡುವಿನ ಅಂತಾರಾಷ್ಟ್ರೀಯ ಸ್ನೇಹವನ್ನು ಶ್ಲಾಘಿಸುವ 2,000 ಕ್ಕೂ ಹೆಚ್ಚು ಕಮೆಂಟ್‌ಗಳನ್ನು ಗಳಿಸಿದೆ.

ಪ್ರಧಾನಿ ಮೋದಿ ತಮ್ಮ ಐದು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತದಲ್ಲಿದ್ದಾರೆ. ಇದಕ್ಕೂ ಮುನ್ನ ಅವರು ನಾರ್ವೆ, ಯುಎಇ, ನೆದರ್ಲ್ಯಾಂಡ್ಸ್ ಮತ್ತು ಸ್ವೀಡನ್ ದೇಶಗಳಿಗೆ ಭೇಟಿ ನೀಡಿದ್ದರು.

ಮೆಲೋನಿ ಜತೆ ದ್ವಿಪಕ್ಷೀಯ ಮಾತುಕತೆ

ಇಟಲಿಯಲ್ಲಿ ಪ್ರಧಾನಿ ಮೋದಿ, ಅಧ್ಯಕ್ಷ ಸೆರ್ಗಿಯೋ ಮಟ್ಟರೆಲ್ಲಾರನ್ನು ಭೇಟಿ ಮಾಡಲು ನಿರ್ಧರಿಸಿದ್ದು, ಬಳಿಕ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಮತ್ತು ಇಂದು (ಬುಧವಾರ) ಭಾರತಕ್ಕೆ ಮರಳುವ ಮುನ್ನ ಇತರ ರಾಜತಾಂತ್ರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !