ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಚುನಾವಣೆ ಇನ್ನು ಕೆಲವೇ ದಿನ ಬಾಕಿ ಇದ್ದು, ಎಲ್ಲಾ ಭಾಗದಲ್ಲೂ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಇದರ ಮದ್ಯೆ ಬುಧವಾರ ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ 75 ಲಕ್ಷ ರೂಪಾಯಿ ನಗದನ್ನು ಸ್ಟಾಟಿಕ್ ಸರ್ವೆಲೆನ್ಸ್ ತಂಡ (ಎಸ್ಎಸ್ಟಿ) ಜಪ್ತಿ ಮಾಡಿದೆ.
ಎಸ್‌ಎಸ್ ಟಿ ತಂಡ ಸೂರತ್ ನಗರದ ಮಹಿಧರ್ ಪುರ ಪ್ರದೇಶದಲ್ಲಿ ಜಡಖಾದಿ ಮೊಹಲ್ಲಾ ಬಳಿಯ ರಂಗ್ರೆಜ್ ಟವರ್ನಲ್ಲಿ ಮೂವರು ಪ್ರಯಾಣಿಕರಿದ್ದ ಕಾರನ್ನು ಅಡ್ಡಗಟ್ಟಿ ಶೋಧ ನಡೆಸಿದಾಗ 75 ಲಕ್ಷ ರೂ.ನಗದು ಪತ್ತೆಯಾಗಿದೆ.
ದೆಹಲಿ ಮೂಲದ ಉದಯ್ ಗುರ್ಜರ್ ಮತ್ತು ಸೂರತ್ಗೆ ಸೇರಿದ ಮೊಹಮ್ಮದ್ ಫೈಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂದೀಪ್ ಎಂಬ ಮೂರನೇ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೋವಾ ಕಾರನ್ನು ‘ವಿನಾಯಕ್ ಟ್ರಾವೆಲ್ಸ್’ ಹೆಸರಿನಲ್ಲಿ ನೋಂದಣಿಯಾಗಿದ್ದು, ವಾಹನದಲ್ಲಿ ಬಿಎಂ ಸಂದೀಪ್ ಎಂಬ ಹೆಸರಿನ ವಿಐಪಿ ಕಾರ್ ಪಾಸ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸೂರತ್ ರ್ಯಾಲಿಯ ಕರಪತ್ರಗಳು ಪತ್ತೆಯಾಗಿವೆ ಎಂದು ಎಸ್ಎಸ್ಟಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂ ಸಂದೀಪ್, ಎಐಸಿಸಿ ಕಾರ್ಯದರ್ಶಿ ಮತ್ತು ದಕ್ಷಿಣ ಗುಜರಾತ್ ವಲಯದ ಪಕ್ಷದ ಉಸ್ತುವಾರಿಯಾಗಿದ್ದಾರೆ. ಹೀಗಾಗಿ ಇದು ಕಾಂಗ್ರೆಸ್ ನಾಯಕರ ಕೈವಾಡವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಸೂರತ್ ಬಿಜೆಪಿ ಮಾಧ್ಯಮ ವಕ್ತಾರ ಜಗದೀಶ್ ಪಟೇಲ್ ಆರೋಪಿಸಿದ್ದಾರೆ.
ಬಿಜೆಪಿ ಆರೋಪಗಳನ್ನು ತಳ್ಳಿಹಾಕಿರುವ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್, ಇದು ಪಕ್ಷಕ್ಕೆ ಕೆಟ್ಟ ಹೆಸರು ತರುವ ಸಂಚು. ಪೊಲೀಸರು ಪ್ರಕರಣದ ತನಿಖೆ ನಡೆಸಲಿ, ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.