Sunday, December 4, 2022

Latest Posts

ʼʼದಸರಾದ ಜಂಬೂಸವಾರಿ ಮೆರವಣಿಗೆ 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ, ಹೊಸ ದಾಖಲೆ ನಿರ್ಮಾಣʼ

ಹೊಸದಿಗಂತ ವರದಿ, ಮೈಸೂರು:
ಎರಡು ವರ್ಷಗಳ ಕೊರೋನಾ ಕಾಟದ ಬಳಿಕ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗಿದ್ದು, ಕೊನೆ ದಿನ ನಡೆದ ಜಂಬೂಸವಾರಿ ಮೆರವಣಿಗೆಯನ್ನು 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಇದು ಹೊಸ ದಾಖಲೆಯಾಗಿದೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಬಿಜೆಪಿ ಜಿಲ್ಲಾ ವಕ್ತಾರ ಮಿರ್ಲೇ ಶ್ರೀನಿವಾಸಗೌಡ ತಿಳಿಸಿದರು.
ಭಾನುವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಮೈಸೂರು ದಸರಾವನ್ನು ನೋಡಲು ಬರಲೆಂದೇ ಅದ್ಧೂರಿಯಾಗಿ ದಸರಾ ಮಹೋತ್ಸವವನ್ನು ಮಾಡಿದ್ದೇವೆ, ಜನರು ಕೂಡ ದಾಖಲೆ ಪ್ರಮಾಣದಲ್ಲಿ ಬಂದು ದಸರಾವನ್ನು ನೋಡಿ ಆನಂದಿಸಿದ್ದಾರೆ. ಇಷ್ಟೊಂದು ಜನರು ಮೈಸೂರಿಗೆ ಬಂದು ದಸರಾವನ್ನು ನೋಡುವಾಗ ಸಣ್ಣ, ಪುಟ್ಟ ವ್ಯತ್ಯಾಸಗಳಾಗುವುದು ಸಹಜ, ಅದನ್ನೆಲ್ಲಾ ಸರಿಪಡಿಸಿಕೊಂಡು ಉಸ್ತುವಾರಿ ಸಚಿವರು ಯಶಸ್ವಿಯಾಗಿ ದಸರಾವನ್ನು ನಡೆಸಿದ್ದಾರೆ. ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ದಸರಾ ಯಶಸ್ವಿಗೊಳಿಸಲು ದುಡಿದ್ದಾರೆ. ಹಾಗಾಗಿ ದಸರಾ ಐತಿಹಾಸಿಕವಾಗಿ ಯಶಸ್ವಿಯಾಗಲು ಎಲ್ಲರೂ ಕಾರಣರಾಗಿದ್ದಾರೆ ಎಂದು ಹೇಳಿದರು.
ಈ ಬಾರಿಯ ದಸರಾವನ್ನು ಯಾವ ರೀತಿ ಅದ್ಧೂರಿಯಾಗಿ ನಡೆಸಬೇಕು ಎಂಬುದರ ಕುರಿತು ಮುಖ್ಯಮಂತ್ರಿಗಳ ನೇತೃತ್ವದ ಹೈಪವರ್ ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿತ್ತು. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾ ಮಟದ ಸಮಿತಿಯಲ್ಲೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಎಲ್ಲಾ ಕಾರ್ಯಕ್ರಮಗಳನ್ನೂ ಲಕ್ಷಾಂತರ ಮಂದಿ ಪ್ರವಾಸಿಗರು, ಜನರು ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಕಾರ್ಯಕ್ರಮಗಳಲ್ಲಿ ಲೋಪಗಳು, ವ್ಯತ್ಯಾಸಗಳು ಕಂಡು ಬಂದ ತಕ್ಷಣವೇ ಶಾಸಕರು ಅದನ್ನು ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು, ಅದನ್ನು ಸಚಿವರು ಕೂಡಲೇ ಸರಿಪಡಿಸಿದ್ದಾರೆ. ಅಲ್ಲದೆ ದಸರಾ ಪ್ರಾರಂಭದಿಂದ ಹಿಡಿದು, ಅದು ಮುಗಿಯುವ ತನಕವೂ ಬಿಡುವಿಲ್ಲದಂತೆ ಎಲ್ಲಾ ಕಾರ್ಯಕ್ರಮಗಳಲ್ಲೂ ಓಡಾಡಿ, ಯಶಸ್ವಿಯಾಗಿ ನಡೆಯುವಂತೆ ಕ್ರಮವನ್ನು ವಹಿಸಿದ್ದಾರೆ. ಎಲ್ಲೂ ಕೂಡ ಒಂದೇ ಒಂದು ಗಲಾಟೆ ಕೂಡ ಆಗಿಲ್ಲ. ಮಿಸ್ಸಿಂಗ್ ಪ್ರಕರಣವೂ ನಡೆದಿಲ್ಲ. ಆ ಮಟ್ಟಿಗೆ ಎಲ್ಲಾ ರೀತಿಯ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದಸರಾ ಕಾರ್ಯಕ್ರಮಗಳು ಚೆನ್ನಾಗಿದ್ದರಿಂದಲೇ ದೇಶ, ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಈಗಲೂ ಕೂಡ ಮೈಸೂರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಹಣವನ್ನು ನೀಡಲಾಗಿದೆ. ದಸರಾದ ಯಶಸ್ಸು ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರಿಗೆ, ಅಧಿಕಾರಿಗಳು, ಹಾಗೂ ಮೈಸೂರಿನ ಜನರಿಗೆ ಸಲ್ಲಬೇಕು ಎಂದರು.
ಎಚ್.ವಿಶ್ವನಾಥ್ ಹೇಳಿಕೆ ಸರಿಯಲ್ಲ:
ಮೊಸರಿನಲ್ಲಿ ಕಲ್ಲು ಹುಡುಕುವಂತೆ ಅದ್ವಾನದ ದಸರಾ ನಡೆದಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿರುವುದು ಸರಿಯಲ್ಲ. ಯಾವ ಉದ್ದೇಶದಿಂದ ಅವರು ಈ ರೀತಿ ಹೇಳಿಕೆ ನೀಡಿದ್ದರೋ ಗೊತ್ತಿಲ್ಲ, ವಿಧಾನಪರಿಷತ್ ಸದಸ್ಯರಾಗಿರುವ ಅವರಿಗೂ ಕೂಡ ಜವಾಬ್ದಾರಿಯಿದೆ. ದಸರಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಾಗ, ಅಥವಾ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಏನಾದರೂ ಸಲಹೆಗಳಿದ್ದರೆ ನೀಡಬಹುದಿತ್ತು, ಆ ಕೆಲಸ ಮಾಡದೆ ಈಗ ಟೀಕಿಸುತ್ತಿರುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ವಸ್ತು ಪ್ರದರ್ಶನದಲ್ಲಿ ಹೆಚ್ಚಿನ ಸೌಲಭ್ಯ:
ದಸರಾ ನೋಡಲು ಬರುತ್ತಿರುವ ಪ್ರವಾಸಿಗರು ಅತಿ ಹೆಚ್ಚಿನ ಪ್ರಮಾಣದಲ್ಲಿ ವಸ್ತು ಪ್ರದರ್ಶನಕ್ಕೂ ಭೇಟಿ ನೀಡಿದ್ದಾರೆ. ದಸರಾ ವೇಳೆ ನಮ್ಮ ನಿರೀಕ್ಷೆಗೂ ಮೀರಿ ಹೆಚ್ಚಿನ ರೀತಿಯಲ್ಲಿ ನಿತ್ಯ 2 ಲಕ್ಷ ಜನರು ಭೇಟಿ ನೀಡುತ್ತಿದ್ದರಿಂದ ಹೆಚ್ಚಿನ ಸೌಲಭ್ಯ, ಸವಲತ್ತುಗಳನ್ನು ಕಲ್ಪಿಸಲು ಸಾಧ್ಯವಾಗದೆ, ಕೆಲವೊಂದು ವ್ಯತ್ಯಾಸಗಳಾದವು. ಈಗ ನಿತ್ಯವೂ 40 ರಿಂದ 50 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಹೆಚ್ಚುವರಿಯಾಗಿ ಇನ್ನೂ ತಾತ್ಕಲಿಕ ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ, ತುರ್ತು ಚಿಕಿತ್ಸ ವಾಹನ, ಅಗ್ನಿಶಾಮಕ ವಾಹನ ನಿಲುಗಡೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ವಕ್ತಾರ ಕೇಬಲ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!