ಹೊಸದಿಗಂತ ವರದಿ ಕಲಬುರಗಿ:
ಹೆತ್ತ ಹಸುಗೂಸನ್ನೇ ಕಸದ ರಾಶಿಗೆ ಎಸೆದು ಪರಾರಿಯಾಗಲು ಯತ್ನಿಸಿದ ಘಟನೆ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಮಗು ರಕ್ಷಿಸಲ್ಪಟ್ಟಿದೆ.
ಗ್ರಾಮದ ಕಸದ ರಾಶಿಯ ಬಳಿ ಮಹಿಳೆಯೊಬ್ಬರು ನವಜಾತ ಶಿಶುವನ್ನು ಬಿಟ್ಟು ಆಟೋದಲ್ಲಿ ತೆರಳಲು ಯತ್ನಿಸುತ್ತಿದ್ದ ವೇಳೆ ಸ್ಥಳೀಯರ ಗಮನಕ್ಕೆ ಬಂದಿದೆ. ಅನುಮಾನಗೊಂಡ ಗ್ರಾಮಸ್ಥರು ಕೂಡಲೇ ಆಟೋವನ್ನು ತಡೆದು ಮಗುವಿನ ರಕ್ಷಣೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಮಕ್ಕಳ ಸಹಾಯವಾಣಿ ಸಂಯೋಜಕ ಬಸವರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ವಿವಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದರು. ಬಳಿಕ ಹಸುಗೂಸನ್ನು ಸುರಕ್ಷಿತವಾಗಿ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದು ಅಗತ್ಯ ಆರೈಕೆ ಮತ್ತು ಪಾಲನೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:
ಇನ್ನೊಂದೆಡೆ ಮಗುವನ್ನು ತೊರೆದು ಹೋಗಲು ಯತ್ನಿಸಿದ ಮಹಿಳೆಯನ್ನು ಗ್ರಾಮಸ್ಥರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದಿರುವ ವಿವಿ ಠಾಣೆ ಪೊಲೀಸರು ಘಟನೆ ಕುರಿತು ವಿಚಾರಣೆ ನಡೆಸುತ್ತಿದ್ದು, ಮಗುವನ್ನು ತೊರೆಯಲು ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಗ್ರಾಮಸ್ಥರ ತ್ವರಿತ ಕಾರ್ಯಾಚರಣೆಯಿಂದ ನವಜಾತ ಶಿಶುವಿನ ಪ್ರಾಣಾಪಾಯ ತಪ್ಪಿದಂತಾಗಿದೆ.



