ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಅವರ ಪತಿ ಉದ್ಯಮಿ ಸೂರಜ್ ನಂಬಿಯಾರ್ ಸಂಬಂಧದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ದಂಪತಿ ಶೀಘ್ರದಲ್ಲೇ ಬೇರ್ಪಡಲಿದ್ದಾರೆ ಎಂಬ ವದಂತಿಗಳು ಇದೀಗ ಅಭಿಮಾನಿಗಳಲ್ಲಿ ಆತಂಕ ಮೂಡಿಸಿವೆ.
ಮೌನಿ ಮತ್ತು ಸೂರಜ್ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಮೌನಿ ರಾಯ್ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಿಂದ ಸೂರಜ್ ಜೊತೆಗಿದ್ದ ಹಲವಾರು ಫೋಟೋಗಳು ಈಗ ಕಾಣಿಸುತ್ತಿಲ್ಲ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಜೊತೆಯಾಗಿ ಯಾವುದೇ ಹೊಸ ಫೋಟೋಗಳನ್ನು ಹಂಚಿಕೊಂಡಿಲ್ಲ. ಈ ಎಲ್ಲಾ ವದಂತಿಗಳ ನಡುವೆಯೂ ದಂಪತಿಗಳಿಬ್ಬರು ಯಾವುದೇ ಅಧಿಕೃತ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳನ್ನು ಎಡೆಮಾಡಿಕೊಟ್ಟಿವೆ.
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ 2022ರ ಜನವರಿ 27 ರಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಂಗಾಳಿ ಮತ್ತು ಮಲಯಾಳಿ ಸಂಪ್ರದಾಯದಂತೆ ನಡೆದಿದ್ದ ಈ ಅದ್ಧೂರಿ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಇವರಿಬ್ಬರ ಪ್ರೇಮಕಥೆ ಯಾವ ಸಿನಿಮಾ ಸ್ಕ್ರಿಪ್ಟ್‌ಗಿಂತ ಕಡಿಮೆಯೇನಿಲ್ಲ. 2019ರ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ದುಬೈನಲ್ಲಿ ಇವರು ಮೊದಲ ಬಾರಿಗೆ ಭೇಟಿಯಾಗಿದ್ದರು. ಸುಮಾರು ಎರಡು ವರ್ಷಗಳ ಕಾಲ ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದ ಈ ಜೋಡಿ, ನಂತರ ವಿವಾಹದ ಮೂಲಕ ಅಧಿಕೃತವಾಗಿ ಒಂದಾಗಿದ್ದರು.
ಕೆಲವರು ಇದು ತಾಂತ್ರಿಕ ದೋಷ ಅಥವಾ ವೈಯಕ್ತಿಕ ಗೌಪ್ಯತೆಯ ಕಾರಣವಿರಬಹುದು ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಇವರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ಎಲ್ಲರೂ ಮೌನಿ ಅಥವಾ ಸೂರಜ್ ಅವರಿಂದ ಅಧಿಕೃತ ಸ್ಪಷ್ಟನೆಗಾಗಿ ಕಾಯುತ್ತಿದ್ದಾರೆ.



