ಸಮಗ್ರ ಕೃಷಿ ಸಾಧಿಸಿ ರೈತರಿಗೆ ಮಾದರಿಯಾದ ಸಿದ್ಧಲಿಂಗ ಶ್ರೀಗಳು

– ರಮೇಶ ಮೋಟೆ

ನರಗುಂದ: ಕೃಷಿಗಾಗಿ ರಸಾಯನಿಕ ವಸ್ತುಗಳ ಬಳಕೆ ಮಾಡುತ್ತ ಆಧುನಿಕ ಕೃಷಿ ಪದ್ಧತಿಯಲ್ಲಿ ಈಗಿನ ರೈತರು ಮುಳುಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇವಲ ಧಾರ್ಮಿಕ ಬೋಧನೆಯಲ್ಲಿ ಮುಳಗದೇ ಮತ್ತು ಮಠಕ್ಕಷ್ಟೇ ಸೀಮಿತವಾಗಿರದೆ ವಿಷಮುಕ್ತ ಕೃಷಿಗಾಗಿ ಗೋ ಆಧಾರಿತ ಮತ್ತು ಸಾವಯವ ಕೃಷಿ ಪದ್ಧತಿಯತ್ತ ಸಾಗುತ್ತಿದ್ದಾರೆ ನರಗುಂದದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು.

ಮಹಾರಾಷ್ಟ್ರದ ಕನ್ನೇರಿ ಕಾಡಸಿದ್ಧೇಶ್ವರ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ಪ್ರೇರಣೆಯ ಜೊತೆಗೆ ವರದಶ್ರೀ ಫೌಂಡೇಶನ್ ಹಾಗೂ ವರದಶ್ರೀ ಪರಿವಾರದ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ಅವರ ಸಹಯೋಗದಲ್ಲಿ ಗುಡ್ಡದ ಹಿಂದೆಯಿರುವ ಶ್ರೀಮಠದ 120 ಎಕರೆ ಭೂಮಿಯಲ್ಲಿ 5 ವರ್ಷಗಳ ಹಿಂದೆ ಶ್ರೀಸಿದ್ಧೇಶ್ವರ ಗೋಶಾಲೆ ಪ್ರಾರಂಭ ಮಾಡಿದ್ದಾರೆ. ಗೋ ಆಧಾರಿತ ಕೃಷಿಗಾಗಿ ಇಲ್ಲಿ 69 ಗೀರ, 37 ಕಿಲಾರಿ, 25 ಕರುಗಳು ಸೇರಿದಂತೆ 130ಕ್ಕೂ ಹೆಚ್ಚು ಗೋವುಗಳು ಇವೆ. ಸಂವರ್ಧನೆ ಕಡೆ ಹೆಚ್ಚು ಗಮನ ಕೊಡಲಾಗುತ್ತಿದೆ.
ಗುಡ್ಡದ ಹಿಂದಿನ 10 ಎಕರೆ ಭೂಮಿಯಲ್ಲಿ ಸ್ವಾಮೀಜಿಗಳು ಸಾವಿರಾರು ಗಿಡಮರ ಬೆಳೆದು ಅರಣ್ಯೀಕರಣದ ಜೊತೆ ಸಮಗ್ರ ಕೃಷಿಯನ್ನು ಮಾಡಿದ್ದಾರೆ. ರಕ್ತಚಂದನ-1000, ಶ್ರೀಗಂಧ-400, ಮಹಾಗಣಿ-400, ಪೇರಲ-2000, ಕರಿಬೇವು-100, ತೆಂಗಿನಮರ-60, ನುಗ್ಗೆ ಗಿಡ-100, ಚಿಕ್ಕು-50, ಮಾವು-20 ಹೀಗೆ ಬೇವಿನಮರ, ಅರಳಿಮರ, ಆಲದಮರ, ಸಂಕೇಶ್ವರ ಗಿಡ, ಸೇರಿದಂತೆ ವಿವಿಧ ತರಹದ ಗಿಡಮರಗಳನ್ನು ಬೆಳೆಯಲಾಗಿದೆ.

ಸಮಗ್ರ ಕೃಷಿಯಲ್ಲಿ ಅರಣ್ಯೀಕರಣ 33%, ತೋಟಗಾರಿಕೆ 33%, ಆಹಾರಧಾನ್ಯ 33% ಮತ್ತು ಹುಲ್ಲು ಬೆಳೆಯಲು 1% ಹೀಗೆ 100% ಸಮಗ್ರ ಕೃಷಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಗೋವು ಆಧಾರಿತ ಸಮಗ್ರ ಕೃಷಿಯನ್ನು ಕಳೆದ ಐದು ವರ್ಷದಿಂದ ಮಾಡುತ್ತ ಬಂದಿದ್ದು, ಸಮಗ್ರ ಕೃಷಿಯಿಂದ ಪ್ರತಿ ವರ್ಷ 4-5 ಲಕ್ಷ ರೂ.ಗಳ ಆದಾಯ ಪಡೆಯುತ್ತಿದ್ದಾರೆ. ಇದಕ್ಕೆಲ್ಲ ಸಿಹಿ ನೀರಿನ 5 ಕೊಳವೆ ಬಾವಿ, 1 ಎಕರೆ ವಿಸ್ತಾರವುಳ್ಳ ಬೃಹತ್ ಕೆರೆ ಮತ್ತು ಮಲಪ್ರಭಾ ಕಾಲುವೆ ಸಹ ಇದೆ.

ಸಿದ್ದೇಶ್ವರ ಗೋ ಶಾಲೆಯನ್ನು ಪ್ರಾರಂಭದಲ್ಲಿ ಒಂದೇ ಹಸುವಿನೊಂದಿಗೆ ಪ್ರಾರಂಭಿಸಲಾಗಿದ್ದು, ಈಗ ನೂರಾರು ಗೋವುಗಳು ಇಲ್ಲಿವೆ. ಪ್ರತಿ ತಿಂಗಳು 3-4 ಕೆಜಿ ಶುದ್ಧ ತುಪ್ಪ ಸಿಗುತ್ತೇ, ಗೋವುಗಳ ಮೂತ್ರ ಮತ್ತು ಗೋಮಯದಿಂದ ಸಾಕಷ್ಟು ಉತ್ಪನ್ನಗಳನ್ನು ತಯಾರಿಸಬಹುದು. ಗೋವುಗಳ 10 ಲೀ ಗೋ ಮೂತ್ರದಿಂದ 4-5 ಲೀ. ಅರ್ಕ ಸಿಗುತ್ತೆ, ಗೋ ಅರ್ಕ, ನಂದಿ ಅರ್ಕ, ಇವುಗಳು 360 ರೋಗಕ್ಕೆ ರಾಮಬಾಣ. ಜೊತೆಗೆ ವಿಭೂತಿ, ಧೂಪ, ಹಣತೆ, ಸಾಬೂನು, ಅಗ್ನಿಹೋತ್ರಕ್ಕೆ ಬೇಕಾದ ಬೆರಣಿಗಳನ್ನು ತಯಾರಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!