ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ಆಟಗಾರ ಎಂ.ಎಸ್. ಧೋನಿ, ತಮ್ಮ ಮುಂಬರುವ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆರೋಗ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ 45 ವರ್ಷದ ಧೋನಿ, ತಮ್ಮ ಫಿಟ್ನೆಸ್ ಹಾಗೂ ಮುಂದಿನ ಸೀಸನ್ ಆಡುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ತಮ್ಮ ವಿಶಿಷ್ಟ ಶೈಲಿಯಲ್ಲಿ ಮಾತನಾಡಿದ ಧೋನಿ, ತಾವು ಮುಂದಿನ ಐಪಿಎಲ್ ಸೀಸನ್ನಲ್ಲಿ ಆಡುವುದನ್ನು ಸಂಪೂರ್ಣವಾಗಿ ವೈದ್ಯಕೀಯ ವರದಿಗಳ ಮೇಲೆಯೇ ಬಿಟ್ಟಿದ್ದಾರೆ. “ನಾನು ಮೊದಲು ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ವೈದ್ಯರು ನೀಡುವ ರಿಪೋರ್ಟ್ ಆಧಾರದ ಮೇಲೆ, ಡಿಸೆಂಬರ್ ಒಳಗೆ ನಾನು ಮತ್ತೊಂದು ಸೀಸನ್ ಆಡಲು ಶಕ್ತನಾಗಿದ್ದೇನೆಯೇ ಎಂಬುದನ್ನು ನಿರ್ಧರಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.
ತಮ್ಮ ದೇಹದ ಸ್ಥಿತಿಯನ್ನು ಹಳೆಯ ಮಾಡೆಲ್ ಕಾರಿಗೆ ಹೋಲಿಸಿ ಮಾತನಾಡಿರುವ ಧೋನಿ, “ಒಂದು ವೇಳೆ ನನ್ನ ದೇಹ ಅಷ್ಟು ಬಲಿಷ್ಠವಾಗಿರದಿದ್ದರೆ, ಈ ಹಳೆಯ ವಿಂಟೇಜ್ ವಾಹನ ರಸ್ತೆಯಲ್ಲಿ ಸುಸೂತ್ರವಾಗಿ ಓಡುವಂತೆ ವೈದ್ಯರು ಎಲ್ಲವನ್ನೂ ಸರಿಯಾಗಿ ನೋಡಿಕೊಳ್ಳಬೇಕು. ಈಗ ಸಂಪೂರ್ಣ ಒತ್ತಡ ವೈದ್ಯರ ಮೇಲಿದೆ” ಎಂದು ಹಾಸ್ಯಾಸ್ಪದವಾಗಿ ಹೇಳಿದ್ದಾರೆ.
ಕಳೆದ 2026ರ ಐಪಿಎಲ್ ಸೀಸನ್ ಅನ್ನು ಮಂಡಿ ನೋವು ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಧೋನಿ ಮಿಸ್ ಮಾಡಿಕೊಂಡಿದ್ದರು. ಇದು ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಆದರೆ ಧೋನಿ ಒಂದು ವೇಳೆ ಮರಳಿದರೆ, ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಲ್ಲದೆ, ಪೂರ್ಣ ಪ್ರಮಾಣದ ವಿಕೆಟ್ ಕೀಪರ್-ಬ್ಯಾಟರ್ ಆಗಿ ಮಾತ್ರವೇ ಆಡಲು ಬಯಸುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಅವರು ಧೋನಿ ಪುನರಾಗಮನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, ಧೋನಿ ಫಿಟ್ ಆಗಿದ್ದರೆ ತಂಡದ ಬಾಗಿಲು ಸದಾ ತೆರೆದಿರುತ್ತದೆ ಎಂದಿದ್ದಾರೆ. 2027ರ ಐಪಿಎಲ್ ಸೀಸನ್ನಲ್ಲಿ ಧೋನಿ ಆಡುತ್ತಾರಾ ಇಲ್ಲವೇ ಎಂಬುದು ಡಿಸೆಂಬರ್ ಒಳಗೆ ಅಧಿಕೃತವಾಗಿ ಬಹಿರಂಗಗೊಳ್ಳಲಿದೆ. ಧೋನಿಯ ಈ ಹೇಳಿಕೆ ಈಗ ಸಿಎಸ್ಕೆ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ.



