August 20, 2026
Thursday, August 20, 2026
spot_img

‘ಎಂಎಸ್‌ಆರ್ ಅಕಾಡೆಮಿಯಾ’ ಬೆಂಗಳೂರಿನಲ್ಲಿ ಆರಂಭ: ಮುಂದಿನ ತಲೆಮಾರಿನ ಫ್ಯಾಷನ್ ಶಿಕ್ಷಣಕ್ಕೆ ಹೊಸ ಆಯಾಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ಯಾಷನ್ ಕ್ಷೇತ್ರದ ವೃತ್ತಿ ಅವಕಾಶಗಳು ಸಾಂಪ್ರದಾಯಿಕ ವಿನ್ಯಾಸದ ವ್ಯಾಪ್ತಿಯನ್ನು ಮೀರಿ ಉದ್ಯಮಶೀಲತೆ, ಸುಸ್ಥಿರತೆ, ತಂತ್ರಜ್ಞಾನ ಮತ್ತು ವಸ್ತುಗಳ ನವೀನತೆಯತ್ತ ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಹೊಸ ಶಿಕ್ಷಣ ಸಂಸ್ಥೆಯೊಂದು ಆರಂಭಗೊಳ್ಳುತ್ತಿದೆ. ಲಕ್ಷ್ಮಿ ರಾಮಯ್ಯ ಅವರ ನೇತೃತ್ವದಲ್ಲಿ ಹಾಗೂ ಆರು ದಶಕಗಳ ರಾಮಯ್ಯ ಶಿಕ್ಷಣ ಪರಂಪರೆಯ ಬೆಂಬಲದೊಂದಿಗೆ ಎಂಎಸ್‌ಆರ್ ಅಕಾಡೆಮಿಯಾ ಈ ವರ್ಷ ಆರಂಭವಾಗುತ್ತಿದ್ದು, ಭಾರತದಲ್ಲಿ ಫ್ಯಾಷನ್ ಮತ್ತು ಸೃಜನಶೀಲ ಶಿಕ್ಷಣಕ್ಕೆ ಹೊಸ ದಿಕ್ಕು ನೀಡುವ ಗುರಿ ಹೊಂದಿದೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಎಂಎಸ್‌ಆರ್ ಅಕಾಡೆಮಿಯಾ, ರಾಮಯ್ಯ ಸಮೂಹ ಸಂಸ್ಥೆಗಳ ಸೃಜನಶೀಲ ಶಿಕ್ಷಣ ಕ್ಷೇತ್ರದ ಮೊದಲ ಹೆಜ್ಜೆಯಾಗಿದೆ. ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಫ್ಯಾಷನ್ ಶಿಕ್ಷಣ ಸುಲಭವಾಗಿ ದೊರೆಯಬೇಕು ಹಾಗೂ ಭಾರತದ ಕರಕುಶಲ ಪರಂಪರೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಕಲಿಕೆಯ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಸಂಸ್ಥೆಯನ್ನು ರೂಪಿಸಲಾಗಿದೆ.

ಸಂಸ್ಥೆಯು ಫ್ಯಾಷನ್ ಕಲೆಕ್ಷನ್, ಫ್ಯಾಷನ್ ಸ್ಟೈಲಿಂಗ್, ಫ್ಯೂಚರ್ ಟೆಕ್ಸ್‌ಟೈಲ್ಸ್ ಮತ್ತು ಇನ್ನೋವೇಶನ್ ಹಾಗೂ ಇಂಡಿಯನ್ ಟೆಕ್ಸ್‌ಟೈಲ್ಸ್ ಮತ್ತು ಲಕ್ಸುರಿ ಕ್ರಾಫ್ಟ್ ವಿಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನೀಡಲಿದೆ. ಸುಸ್ಥಿರತೆ, ಸರ್ಕ್ಯುಲರ್ ಡಿಸೈನ್, ಕೃತಕ ಬುದ್ಧಿಮತ್ತೆ ಆಧಾರಿತ ಕಾರ್ಯವಿಧಾನಗಳು, 3D ಪ್ರೋಟೋಟೈಪಿಂಗ್, ಉದ್ಯಮಶೀಲತೆ ಮತ್ತು ಭಾರತೀಯ ಕರಕುಶಲ ಕ್ಷೇತ್ರಗಳನ್ನು ಪಠ್ಯಕ್ರಮದ ಅವಿಭಾಜ್ಯ ಭಾಗವಾಗಿ ಒಳಗೊಳ್ಳಲಾಗಿದೆ.

ಇಂದಿನ ಫ್ಯಾಷನ್ ಉದ್ಯಮವು ಕೃತಕ ಬುದ್ಧಿಮತ್ತೆ, ಸುಸ್ಥಿರತೆ, ಡಿಜಿಟಲ್ ವಾಣಿಜ್ಯ ಮತ್ತು ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳಿಂದ ವೇಗವಾಗಿ ರೂಪಾಂತರಗೊಳ್ಳುತ್ತಿದೆ. ಹೀಗಾಗಿ ಫ್ಯಾಷನ್ ಪದವೀಧರರು ಕೇವಲ ವಿನ್ಯಾಸ ಮಾಡುವುದಷ್ಟೇ ಅಲ್ಲದೆ ಬ್ರ್ಯಾಂಡಿಂಗ್, ಉದ್ಯಮಶೀಲತೆ, ಡಿಜಿಟಲ್ ತಂತ್ರಜ್ಞಾನ, ವಸ್ತುಗಳ ನವೀನತೆ, ಜವಾಬ್ದಾರಿಯುತ ವಿನ್ಯಾಸ ಮತ್ತು ಜಾಗತಿಕ ಮಾರುಕಟ್ಟೆಯ ಅರಿವು ಹೊಂದಿರಬೇಕಾಗಿದೆ.

ಎಂಎಸ್‌ಆರ್ ಅಕಾಡೆಮಿಯಾ ಸಂಸ್ಥಾಪಕಿ ಲಕ್ಷ್ಮಿ ರಾಮಯ್ಯ ಮಾತನಾಡಿ, “ವಿದ್ಯಾರ್ಥಿಗಳಿಗೆ ಕೇವಲ ಕಲೆಕ್ಷನ್‌ಗಳನ್ನು ವಿನ್ಯಾಸಗೊಳಿಸುವುದನ್ನು ಕಲಿಸುವ ಮತ್ತೊಂದು ಫ್ಯಾಷನ್ ಶಾಲೆಯನ್ನು ಸ್ಥಾಪಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ತಂತ್ರಜ್ಞಾನ, ಸುಸ್ಥಿರತೆ, ಉದ್ಯಮಶೀಲತೆ ಮತ್ತು ಕರಕುಶಲತೆಗಳೊಂದಿಗೆ ವಿನ್ಯಾಸವನ್ನು ಸಂಯೋಜಿಸಿ, ಇಂದಿನ ಸೃಜನಶೀಲ ಉದ್ಯಮದ ವಾಸ್ತವತೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಸಂಸ್ಥೆಯನ್ನು ನಿರ್ಮಿಸಲು ಬಯಸಿದ್ದೇವೆ,” ಎಂದರು.

ಶೈಕ್ಷಣಿಕ ಪಠ್ಯಕ್ರಮದ ಜೊತೆಗೆ ಅಂತಾರಾಷ್ಟ್ರೀಯ ಅಧ್ಯಾಪಕರ ಮಾಸ್ಟರ್‌ಕ್ಲಾಸ್‌ಗಳು, ವಿನ್ಯಾಸ ಅಟೆಲಿಯರ್‌ಗಳ ಭೇಟಿಗಳು, ಕೈಗಾರಿಕಾ ಇಂಟರ್ನ್‌ಶಿಪ್‌ಗಳು ಮತ್ತು ಉದ್ಯಮ ತಜ್ಞರಿಂದ ತರಬೇತಿ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ತರಗತಿಯ ಹೊರಗೂ ಫ್ಯಾಷನ್ ಕ್ಷೇತ್ರದ ಪ್ರಾಯೋಗಿಕ ಅನುಭವ ಪಡೆಯಲಿದ್ದಾರೆ.

ಇಟಲಿಯ ಪ್ರಸಿದ್ಧ ಫ್ಯಾಷನ್ ಸಂಸ್ಥೆಯಾದ Istituto di Moda Burgo, Milan ಜೊತೆಗಿನ ಸಹಯೋಗವು ಅಕಾಡೆಮಿಯಾದ ಜಾಗತಿಕ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸಿದೆ. ಅಂತಾರಾಷ್ಟ್ರೀಯ ವಿನಿಮಯ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಫ್ಯಾಷನ್ ಪದ್ಧತಿಗಳ ಪರಿಚಯವೂ ದೊರೆಯಲಿದೆ.

ಇದನ್ನೂ ಓದಿ:

1962ರಲ್ಲಿ ದಿವಂಗತ ಶ್ರೀ ಎಂ.ಎಸ್. ರಾಮಯ್ಯ ಅವರು ಸ್ಥಾಪಿಸಿದ ರಾಮಯ್ಯ ಸಮೂಹವು ಶಿಕ್ಷಣ ಕ್ಷೇತ್ರದಲ್ಲಿ ಆರು ದಶಕಗಳ ಪರಂಪರೆಯನ್ನು ಹೊಂದಿದೆ. ಎಂಜಿನಿಯರಿಂಗ್, ವೈದ್ಯಕೀಯ, ನಿರ್ವಹಣೆ, ಕಾನೂನು ಮತ್ತು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 28 ಸಂಸ್ಥೆಗಳನ್ನು ಹೊಂದಿರುವ ಸಮೂಹವು ಇದೀಗ ಮೊದಲ ಬಾರಿಗೆ ಫ್ಯಾಷನ್ ಮತ್ತು ಸೃಜನಶೀಲ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸುತ್ತಿದೆ.

“ನನ್ನ ತಾತ ದಿವಂಗತ ಎಂ.ಎಸ್. ರಾಮಯ್ಯ ಅವರಿಂದ ನಾನು ಮುಂದುವರಿಸಿಕೊಂಡು ಬಂದಿರುವುದು ನಿರ್ದಿಷ್ಟ ವಿಧಾನವಲ್ಲ; ಸರಳತೆ, ಪ್ರಾಮಾಣಿಕತೆ, ಶಿಸ್ತು ಮತ್ತು ಸವಾಲುಗಳನ್ನು ಎದುರಿಸುವ ಮನೋಭಾವ. ಇದೇ ಮೌಲ್ಯಗಳನ್ನು ಎಂಎಸ್‌ಆರ್ ಅಕಾಡೆಮಿಯಾದಲ್ಲೂ ಅಳವಡಿಸಲು ಬಯಸುತ್ತೇನೆ,” ಎಂದು ಲಕ್ಷ್ಮಿ ರಾಮಯ್ಯ ಹೇಳಿದರು.

ಕರಕುಶಲತೆ, ತಂತ್ರಜ್ಞಾನ, ಸುಸ್ಥಿರತೆ ಮತ್ತು ಉದ್ಯಮಶೀಲತೆಯನ್ನು ಆಧಾರವಾಗಿಸಿಕೊಂಡಿರುವ ಎಂಎಸ್‌ಆರ್ ಅಕಾಡೆಮಿಯಾ, ವಿನ್ಯಾಸಕರು, ಸ್ಟೈಲಿಸ್ಟ್‌ಗಳು, ಸೃಜನಶೀಲ ಉದ್ಯಮಿಗಳು ಮತ್ತು ನವೋದ್ಯಮಿಗಳನ್ನು ಬೆಳೆಸುವ ಗುರಿ ಹೊಂದಿದೆ. ಜಾಗತಿಕ ದೃಷ್ಟಿಕೋನದೊಂದಿಗೆ ಭಾರತೀಯ ಜ್ಞಾನ ಮತ್ತು ಕರಕುಶಲ ಪರಂಪರೆಯನ್ನು ಸಂಯೋಜಿಸುವ ಮೂಲಕ ದಕ್ಷಿಣ ಭಾರತದಲ್ಲಿ ಫ್ಯಾಷನ್ ಶಿಕ್ಷಣಕ್ಕೆ ಹೊಸ ಮಾನದಂಡ ರೂಪಿಸಲು ಸಂಸ್ಥೆ ಉದ್ದೇಶಿಸಿದೆ.

ಮುಂಬರುವ ಬ್ಯಾಚ್‌ಗೆ ಅರ್ಜಿಗಳು ಈಗಾಗಲೇ ಆರಂಭವಾಗಿದ್ದು, ತರಗತಿಗಳು ಸೆಪ್ಟೆಂಬರ್ ಮೊದಲ ವಾರದಿಂದ ಆರಂಭಗೊಳ್ಳಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !