ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾದ ನಿವೇಶನ ಹಂಚಿಕೆ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ನಡೆಸುತ್ತಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ನ.18) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರ ವಿಚಾರಣೆ ನಡೆಸಿದರು. ಮುಡಾ ಹಗರಣದಲ್ಲಿ ಮಲ್ಲಿಕಾರ್ಜುನ ಸ್ವಾಮಿ 3ನೇ ಆರೋಪಿಯಾಗಿದ್ದಾರೆ.
ಬೆಂಗಳೂರಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆ ನಡೆದಿದ್ದು, ಕೆಸರೆ ಗ್ರಾಮದಲ್ಲಿರುವ 3.16 ಎಕರೆ ಜಮೀನಿನ ಕುರಿತು ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಮಾಹಿತಿ ಪಡೆದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಮುಡಾ ಮಾಜಿ ಆಯುಕ್ತನಿಗೆ ನೋಟಿಸ್
ಲೋಕಾಯುಕ್ತ ಅಧಿಕಾರಿಗಳು ಮುಡಾದ ಹಿಂದಿನ ಆಯುಕ್ತರಾಗಿದ್ದ ನಟೇಶ್ ಅವರಿಗೆ ನೋಟಿಸ್ ನೀಡಿದ್ದಾರೆ. ಮಂಗಳವಾರ (ನ.19) ವಿಚಾರಣೆಗೆ ಹಾಜರಾಗುವಂತೆ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ನೋಟಿಸ್ ಮೂಲಕ ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಯನ್ನು ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ 17(A) ಅಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮುಡಾದ ಮಾಜಿ ಆಯುಕ್ತ ನಟೇಶ್ ಅವರನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಬಳಿ ಒಂದು ತಿಂಗಳ ಹಿಂದೆಯೇ ಅನುಮತಿ ಕೇಳಿದ್ದರು. ಮುಖ್ಯ ಕಾರ್ಯದರ್ಶಿಗಳು ಎರಡು ದಿನಗಳ ಹಿಂದೆ ವಿಚಾರಣೆಗೆ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟೇಶ್ ಅವರಿಗೆ ಲೋಕಾಯುಕ್ತ ನೋಟಿಸ್ ನೀಡಿತ್ತು.