Wednesday, February 1, 2023

Latest Posts

ಮನಸ್ಸಿನಲ್ಲಿ ಭಾವನೆಗಳನ್ನು ಅರಳಿಸುವ ಶಕ್ತಿ ಸಂಗೀತಕ್ಕಿದೆ: ಅನಂತಶಯನ

ಹೊಸದಿಗಂತ ವರದಿ ಮಡಿಕೇರಿ:

ಮುತ್ತಿನ ಹಾರ ವಾದ್ಯಗೋಷ್ಠಿ ಕಲಾವಿದರ ಸಂಘದಿಂದ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಮುತ್ತಿನ ಹಾರ ವಾದ್ಯಗೋಷ್ಠಿ ಕಲಾವಿದರ ಸಂಘದ ಪ್ರಥಮ ವಾರ್ಷಿಕೋತ್ಸವದ ಸಂದರ್ಭ ಚೆಸ್ಕಾಂ ಇಲಾಖೆಯಲ್ಲಿನ ಸೇವೆಗಾಗಿ ಪ್ರಶಾಂತ್ ಮಾಲಿ, ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಚಾಲಕ ವಿ.ಜಿ.ನಾರಾಯಣ, ಮಡಿಕೇರಿ ಅಂಚೆ ಇಲಾಖೆ ಸಿಬ್ಬಂದಿ ಪಿ.ಎಂ.ಪೊನ್ನಮ್ಮ, 7 ನೇ ಹೊಸಕೋಟೆಯ ವಿಕಾಸ ಜನಸೇವಾ ಟ್ರಸ್ಟ್’ನ ಅಧ್ಯಕ್ಷ ಎಚ್.ಕೆ.ರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಮನಸ್ಸಿನಲ್ಲಿ ಭಾವನೆಗಳನ್ನು ಅರಳಿಸುವ, ಹೃದಯಕ್ಕೆ ನಾಟುವಂತೆ ಮಾಡುವ ಅಪೂರ್ವ ಶಕ್ತಿ ಸಂಗೀತಕ್ಕಿದೆ ಎಂದು ಹೇಳಿದರು.
ಭಕ್ತಿ, ಪ್ರೇಮ, ಭಾವನೆ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಹಾಡುಗಳು ಹೃದಯವನ್ನು ತಟ್ಟಬಲ್ಲವು ಎಂದೂ ಅನಂತಶಯನ ಹೇಳಿದರು.
ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾತಂಡಗಳು ಕಂಡುಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮಡಿಕೇರಿಯಲ್ಲಿಯೂ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟು ಕಲಾಪ್ರೇಮಿಗಳಿಗೆ ತಲುಪಬೇಕಾಗಿದೆ ಎಂದು ಹೇಳಿದರು.
ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾವಿದ ರವಿ ಸಂತೋಷ್ ಮಾತನಾಡಿ, ಹಳೇ ಕಾಲದ ವಾದ್ಯಪರಿಕರಗಳ ಅರಿವು ಅನೇಕರಲ್ಲಿ ಇರುವುದಿಲ್ಲ. ಆಧುನಿಕ ಶೈಲಿಯ ಹಾಡುಗಾರರು ಹಳೇ ಹಾಡುಗಳ ಮಾಧುರ್ಯಕ್ಕೆ ಕಾರಣವಾಗುತ್ತಿದ್ದ ಪುರಾತನ ಕಾಲದ ಜಾನಪದೀಯ ವಾದ್ಯ ಪರಿಕರಗಳ ಮಹತ್ವ ಮರೆಯಬಾರದು. ದಸರಾ ಸೇರಿದಂತೆ ಸರ್ಕಾರ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳಿಗೆ ಆದ್ಯತೆ ದೊರಕಬೇಕು ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕಲಾವಿದರ ಜೀವನ ಇನ್ನೂ ಸಂಕಷ್ಟದಿಂದ ಹೊರಬಂದಿಲ್ಲ. ಅದೆಷ್ಟೇ ಸಾಂಸ್ಕೃತಿಕ ಪ್ರತಿಭೆಯಿದ್ದರೂ ಸೂಕ್ತ ವರಮಾನ ತರುವ ವೃತ್ತಿಯಿಲ್ಲದೇ ಹೋದರೆ ಸಂಗೀತಗಾರನ ಜೀವನ ಒಪ್ಪತ್ತಿನ ಊಟಕ್ಕೂ ಪರದಾಡುವಂತಿರುತ್ತದೆ ಎಂದು ಹೇಳಿದರಲ್ಲದೆ, ಕಲಾವಿದರ ಪ್ರತಿಭೆಯನ್ನು ಶ್ಲಾಘಿಸುವದರ ಜತೆಜತೆಗೇ ಅವರ ಕಷ್ಟಕ್ಕೆ ಸ್ಪಂದಿಸುವ ಮನಸ್ಸೂ ಕಲಾಭಿಮಾನಿಗಳಲ್ಲಿ ಇರಬೇಕು ಎಂದು ಅಭಿಪ್ರಾಯಪಟ್ಟರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇತ್ತೀಚಿನ ವರ್ಷಗಳಲ್ಲಿ ಪ್ರದರ್ಶಿಸುತ್ತಿದ್ದು,, ಇಂತಹ ಸಾಧನೆ ಹಿನ್ನಲೆಯಲ್ಲಿರುವ ಶಿಕ್ಷಕ ವರ್ಗ ಪ್ರಶಂಸನೀಯ ಎಂದರು.
ಮುತ್ತಿನ ಹಾರ ಸಾಂಸ್ಕೖತಿಕ ಸಂಘಟನೆ ಮೂಲಕ ಗ್ರಾಮಾಂತರ ಪ್ರದೇಶದ 40 ಕ್ಕೂ ಅಧಿಕ ಗಾಯಕರು ಒಟ್ಟಾಗಿರುವುದು ಶ್ಲಾಘನೀಯ. ಕೊಡಗಿನ ಕಲಾತಂಡವಾಗಿ ಇವರು ರಾಜ್ಯ ಮಟ್ಟದಲ್ಲಿ ಬೆಳೆಯುವಂತಾಗಬೇಕು ಎಂದು ಹಾರೈಸಿದ ಅನಿಲ್, ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸುಸಜ್ಜಿತ ಗ್ಯಾಲರಿ ನಿರ್ಮಾಣವಾಗಿರುವುದರಿಂದಾಗಿ ಕೊಡಗಿನ ಸಾಂಸ್ಕೃತಿಕ ತಂಡಗಳಿಗೆ ಬಹಳ ಅನುಕೂಲವಾಗಿದ್ದು ಇದನ್ನು ಕಲಾವಿದರು ಹೆಚ್ಚು ಕಾರ್ಯಕ್ರಮ ನೀಡುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೆಯ್ಯಂಡ ಸತ್ಯಗಣಪತಿ ಮಾತನಾಡಿ, ಕಲಾವಿದರನ್ನು ಒಗ್ಗೂಡಿಸಲು ಮುಂದಾಗಿರುವ ಮುತ್ತಿನ ಹಾರ ವಾದ್ಯಗೋಷ್ಠಿ ಕಲಾವಿದರ ಸಂಘದ ಪ್ರಯತ್ನ ಮಾದರಿಯಾಗಿದೆ ಎಂದರು.
ಪತ್ರಕರ್ತ ಚೇತನ್ ರಾಜ್, ಮುತ್ತಿನ ಹಾರ ವಾದ್ಯಗೋಷ್ಟಿ ಕಲಾವಿದರ ಸಂಘದ ಅಧ್ಯಕ್ಷ ಸುಭಾಷ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಪರಮೇಶ್, ಉಪಾಧ್ಯಕ್ಷ ಸತೀಶ್, ಗೌರವ ಸಲಹೆಗಾರ ಪಿ.ರವಿ ಹಾಜರಿದ್ದರು.
ಸಂಜೆಯಿಂದ ರಾತ್ರಿಯವರೆಗೂ ಕೊಡಗಿನ 40 ಗಾಯಕರು ಗಾಂಧಿ ಮೈದಾನದ ಬಯಲು ರಂಗಮಂದಿರದಲ್ಲಿ ವೈವಿಧ್ಯಮಯ ಹಾಡು, ಗಾಯನಗಳ ಕಾರ್ಯಕ್ರಮ ನೀಡಿ ಕಲಾಪ್ರೇಮಿಗಳ ಮನರಂಜಿಸಿದರು.
ಪ್ರತಿಮಾ ರೈ ಹಾಗೂ ಕೆ.ಕೆ.ಜಯಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!