Saturday, April 1, 2023

Latest Posts

ಸಿಬ್ಬಂದಿಗಳಿಗಾಗಿ ಹೊಸ ನಗರವನ್ನೇ ನಿರ್ಮಿಸುತ್ತಿದ್ದಾರಂತೆ ಮಸ್ಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಪೇಸ್‌ ಎಕ್ಸ್‌, ಟೆಸ್ಲಾ ಮತ್ತು ತೀರಾ ಇತ್ತೀಚೆಗೆ ಟ್ವಿಟರ್‌ ಹೀಗೆ ವಿಶ್ವದ ಪ್ರಸಿದ್ಧ ಕಂಪನಿಗಳ ಮುಖ್ಯಸ್ಥ ಬಿಲಿಯನೇರ್‌ ಎಲಾನ್‌ ಮಸ್ಕ್‌ ಬಗ್ಗೆ ನೀವೆಲ್ಲ ಕೇಳಿಯೇ ಇರುತ್ತೀರಿ. ಟ್ವೀಟರ್‌ ಸೌಆಧೀನ ಪಡಿಸಿಕೊಂಡ ನಂತರ ನಷ್ಟದಲ್ಲಿದ್ದ ಮಸ್ಕ್‌ ಇತ್ತೀಚೆಗೆ ಮತ್ತೆ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಸುದ್ದಿಗಳನ್ನೂ ನೀವು ಓದಿರುತ್ತೀರಿ. ಇದೀಗ ಮಸ್ಕ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣವಾದ ಅಂಶವೆಂದರೆ ಮಸ್ಕ್‌ ಹೊಸದೊಂದು ನಗರವನ್ನೇ ಸೃಷ್ಟಿಸುತ್ತಿರುವುದು.

ತನ್ನ ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ ಮಸ್ಕ ಹೊಸತೊಂದು ನಗರವನ್ನೇ ನಿರ್ಮಿಸಲು ಯೋಜಿಸಿದ್ದು ಮಸ್ಕ್‌ ಒಡೆತನದಲ್ಲಿರುವ ಎಲ್ಲಾ ಕಂಪನಿಗಳು ಅಮೆರಿಕದ ಟೆಕ್ಸಾಸ್‌ ಸಮೀಪದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿವೆ ಎಂದು ವಾಲ್ ಸ್ಟ್ರೀಟ್ ಜರ್ನಲ್‌ನ ವರದಿ ತಿಳಿಸಿದೆ. ಆಸ್ಟಿನ್ ಬಳಿ ಕನಿಷ್ಠ 3,500 ಎಕರೆಗಳಷ್ಟು ಆಸ್ತಿಯನ್ನು ಖರೀದಿಸಲಾಗಿದೆ.

ʼಸ್ನೇಲ್‌ ಬ್ರೂಕ್‌ʼ ಎಂಬ ಹೆಸರಿನ ನಗರವೊಂದನ್ನು ತಮ್ಮ ಉದ್ಯೋಗಿಗಳಿಗಾಗಿಯೇ ನಿರ್ಮಿಸಲು ಮಸ್ಕ್‌ ಮುಂದಾಗಿದ್ದಾರೆ. ಸಿಬ್ಬಂದಿಗೆ ಅನುಕೂಲವಾಗಲೆಂದು ನೂರಕ್ಕೂ ಹೆಚ್ಚು ಮನೆಗಳು, ಸ್ವಿಮ್ಮಿಂಗ್‌ಪೂಲ್‌, ಕ್ರೀಡಾಂಗಣ ಇತ್ಯಾದಿ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದ್ದು ಇತರ ಪ್ರದೇಶಕ್ಕಿಂತ ಕಡಿಮೆ ಬಾಡಿಗೆ ಸೌಲಭ್ಯವೂ ಸಿಗಲಿದೆ.

ಈ ಹಿಂದೆ, 2020 ರಲ್ಲಿ ಎಲೋನ್ ಮಸ್ಕ್ ಅವರು ಟೆಸ್ಲಾ ಪ್ರಧಾನ ಕಚೇರಿ ಹಾಗು ತಮ್ಮ ವೈಯುಕ್ತಿಕ ನಿವಾಸವನ್ನು ಟೆಕ್ಸಾಸ್‌ ಗೆ ವರ್ಗಾಯಿಸಿದ್ದರು. 2022 ರಲ್ಲಿ, ಟೆಸ್ಲಾ ಆಸ್ಟಿನ್‌ನಲ್ಲಿ ಹೊಸ ಗಿಗಾಫ್ಯಾಕ್ಟರಿ ಉತ್ಪಾದನಾ ಸೌಲಭ್ಯವನ್ನು ತೆರೆಯಿತು. ಸ್ಪೇಸ್‌ಎಕ್ಸ್ ಮತ್ತು ಬೋರಿಂಗ್ ಸೇರಿದಂತೆ ಮಸ್ಕ್‌ ಹಿಡಿತದಲ್ಲಿರುವ ಎಲ್ಲಾ ಕಂಪನಿಗಳ ಕಚೇರಿಗಳನ್ನೂ ಟೆಕ್ಸಾಸ್‌ ನಲ್ಲಿ ತೆರೆಯಲಾಗಿದ್ದು ಇದಕ್ಕೆ ಪೂರಕವಾಗಿ ಈ ನಗರ ನಿರ್ಮಾಣವಾಗಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!