Friday, September 30, 2022

Latest Posts

ನನ್ನ ತಂದೆಯನ್ನು ತೆಲಂಗಾಣ ಸಿಎಂ ಸಂಚುರೂಪಿಸಿ ಕೊಲೆ ಮಾಡಿಸಿದ್ದಾರೆ: ರಾಜಕೀಯ ಕೋಲಾಹಲ ಸೃಷ್ಟಿಸಿದ ವೈಎಸ್​ಆರ್ ಪುತ್ರಿ ಹೇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಅವರು ಸಂಚುರೂಪಿಸಿ ನನ್ನ ತಂದೆಯನ್ನು ಕೊಲೆ ಮಾಡಿಸಿದ್ದಾರೆ ಎಂದು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ (ವೈಎಸ್​ಆರ್​) ಪುತ್ರಿ ಶರ್ಮಿಳಾ ಹೇಳಿಕೆ ನೀಡಿದ್ದು, ಇದೀಗ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.

ನನ್ನ ತಂದೆ ವೈ.ಎಸ್. ರಾಜಶೇಖರ್ ರೆಡ್ಡಿ ಸಾವಿನ ಹಿಂದೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಕೈವಾಡವಿದೆ. ನನ್ನನ್ನೂ ಕೊಲೆ ಮಾಡಲು ಕುತಂತ್ರ ರೂಪಿಸಲಾಗುತ್ತಿದೆ. ಆದರೆ ನಾನು ಅಂತಹ ಕುತಂತ್ರಗಳಿಗೆ ಜಗ್ಗುವುದಿಲ್ಲ ಎಂದು ಶರ್ಮಿಳಾ ಹೇಳಿಕೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಶರ್ಮಿಳಾ ಅಸಭ್ಯ ಭಾಷೆ ಬಳಸಿರುವ ಬಗ್ಗೆ ಟಿಆರ್‌ಎಸ್ ಶಾಸಕರು ಸ್ಪೀಕರ್‌ಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಇಂಥದ್ದೊಂದು ಆರೋಪವನ್ನು ಶರ್ಮಿಳಾ ಮಾಡಿದ್ದಾರೆ.

‘ನನ್ನ ಉಸಿರು ಇರುವವರೆಗೂ ಜನರಿಂದ ನನ್ನನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಅರಾಜಕತೆ ಬಗ್ಗೆ ನಾನು ಮಾತಾಡಿದ್ದೇನೆ. ನನ್ನ ಕತ್ತು ಹಿಸುಕುವುದು ನಿಮಗೆ ತರವಲ್ಲ. ಪೊಲೀಸರು ನಿಮ್ಮ ಪರವಾಗಿದ್ದಾರೆ. ಪೊಲೀಸರನ್ನು ನಿಮ್ಮ ಮನೆ ಕೆಲಸದವರಂತೆ ಬಳಸಿಕೊಳ್ಳುತ್ತಿದ್ದೀರಿ’ ಎಂದು ಶರ್ಮಿಳಾ ಕಿಡಿ ಕಾರಿದ್ದಾರೆ.

‘ಆಡಳಿತಾರೂಢ ಟಿಆರ್‌ಎಸ್ ಸರ್ಕಾರ ನನ್ನನ್ನು ಪಾದಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ತಡೆಯಬಹುದು, ಯಾವುದೇ ಕ್ಷಣದಲ್ಲಿ ಬಂಧಿಸಬಹುದು. ಸಚಿವ ನಿರಂಜನ್ ರೆಡ್ಡಿ ಅವರು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ನೀಡಿದ್ದೆ. ಆದರೆ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಲಿಲ್ಲ. ಬದಲಿಗೆ ರೆಡ್ಡಿ ವಿರುದ್ಧ ಟೀಕೆ ಮಾಡಿದ್ದಕ್ಕೆ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್​ ಅವರೇ ನನಗೇನೂ ಬೇಡಿ (ಕೈಕೋಳ) ಎಂದರೆ ಭಯವಿಲ್ಲ. ನಿಮಗೆ ಧಮ್ ಇದ್ದರೆ ನನ್ನನ್ನು ಅರೆಸ್ಟ್ ಮಾಡಿಸಿ. ನನ್ನ ಹೆಸರು ವೈ.ಎಸ್. ಶರ್ಮಿಳಾ. ನಾನು ವೈ.ಎಸ್ ರಾಜಶೇಖರ್ ರೆಡ್ಡಿಯವರ ಪುತ್ರಿ. ನಾನು ಹುಲಿ ಮರಿ. ಕೈ ಕೋಳಗಳು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!