Monday, August 15, 2022

Latest Posts

ಮೈಸೂರು: ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅಂತಾರಾಷ್ಟ್ರೀಯ ಕ್ರೀಡಾಪಟು ಧನುಷಾ

ಹೊಸದಿಗಂತ ವರದಿ, ಮೈಸೂರು:
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಮೈಸೂರು ವಿವಿ ಪೆವಿಲಿಯನ್ ಮೈದಾನದಲ್ಲಿ ಆಯೋಜಿಸಿದ್ದ ಪತ್ರಕರ್ತರ ಕ್ರೀಡಾಕೂಟಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಅಥ್ಲೀಟ್ ಧನುಷಾ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪತ್ರಕರ್ತರು ನನ್ನ ಪ್ರತಿಭೆ ಗುರುತಿಸಿ ಮತ್ತಷ್ಟು ಸಾಧನೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಹೀಗೆ ಸಾಧನೆಗೆ ಪ್ರೋತ್ಸಾಹಿಸಿದವರೆಲ್ಲರೂ ಇಂದು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೇ ರೀತಿ ನಿತ್ಯವೂ ಪತ್ರಕರ್ತರು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.
ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಎರಡು ವರ್ಷಗಳ ಕೋವಿಡ್ ನಂತರ ಕ್ರೀಡೆ ಆಯೋಜನೆ ಮಾಡಲಾಗುತ್ತಿದೆ. ದಿನದ ಹೆಚ್ಚುಕಾಲ ಚಟುವಟಿಕೆ ಇಲ್ಲದೇ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಡೆಸ್ಕ್ ಉದ್ಯೋಗಿಗಳಿಗೆ ಕ್ರೀಡೆ ಮುಖ್ಯ.
ಜಾತಿ, ಮತ, ಹಣ, ವೃತ್ತಿ ಬೇಧವಿಲ್ಲದೇ ಎಲ್ಲರೂ ಒಂದೇ ಎಂಬ ಭಾವನೆ ಕ್ರೀಡೆಯಿಂದ ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಒಂದು ಗಂಟೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು. ನಾನು ಗೆಸ್ಟ್ ಆಗಿ ಬಂದಿಲ್ಲ, ನಾನೂ ಪತ್ರಿಕೋದ್ಯಮ ವಿದ್ಯಾರ್ಥಿ. ಹಾಗಾಗಿ ಇದು ನಮ್ಮ ಟೀಮ್ ನಮ್ಮವರನ್ನೆಲ್ಲಾ ಒಳಗೊಂಡ ಕ್ರೀಡಾಕೂಟ ಇದಾಗಿದೆ ಎಂದರು.
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕೃಷ್ಣಯ್ಯ ಮಾತನಾಡಿ, ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗವಾಗಿರಬೇಕು. ಯಾರು ಉತ್ತಮ ದೈಹಿಕ ಸಾಮರ್ಥ್ಯವನ್ನು ಇಟ್ಟುಕೊಂಡಿರುತ್ತಾರೆ. ಅವರಲ್ಲಿ ಒಳ್ಳೆಯ ಆರೋಗ್ಯ ಇರುತ್ತದೆ. ಜ್ಞಾನ ಸಂಪಾದನೆಗೆ ಚಟುವಟಿಕೆಯಿಂದ ಇರುವುದು ಅಗತ್ಯವಿದೆ. ಇದರಿಂದ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಕ್ರೀಡೆ ಎಲ್ಲಾ ಸಂಬಂಧವನ್ನೂ ಬೆಳೆಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಎರಡು ವರ್ಷದ ಕೋವಿಡ್ ನಿಂದ ನಾವೆಲ್ಲಾ ಮಾನಸಿಕವಾಗಿ ಕುಗ್ಗಿ ಹೋಗಿದ್ದೆವು. ಆದರೆ ಈ ಅವಧಿಯಲ್ಲಿ ನಾವು ಚಟುವಟಿಕೆಯಿಂದ ಇದ್ದುದರಿಂದಲೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಯಿತು. ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುವುದೇ ಸಂತೋಷದ ವಿಚಾರ. ಎರಡು ದಿನ ನಡೆಯುವ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ,ನಗರ ಕಾರ್ಯದರ್ಶಿ ಪಿ. ರಂಗಸ್ವಾಮಿ, ನಿರ್ದೇಶಕರಾದ ಶಿವಮೂರ್ತಿ ಜುಪ್ತಿಮಠ, ಸುರೇಶ್, ಕೃಷ್ಣ, ರಾಜ್ಯಸಮಿತಿ ಸದಸ್ಯ ರಾಘವೇಂದ್ರ, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ, ಸದಸ್ಯರಾದ ಎಸ್.ಕೆ. ಚಂದ್ರಶೇಖರ್ ಹಾಗೂ ಸಂಘದ ಎಲ್ಲಾ ಸದಸ್ಯರು ಹಾಗೂ ಇತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss